(ನ್ಯೂಸ್ ಕಡಬ) newskadaba.com ಮಂಗಳೂರು, ಆ 19. ಸೆಂಟ್ರಲ್ ಮಾರುಕಟ್ಟೆ ಹಳೆಯಾಗಿದ್ದು ಅಪಾಯದಂಚಿನಲ್ಲಿರುವ ಕಾರಣ ಹಾಗೂ ಕೊರೋನಾ ಕಾರಣದಿಂದಾಗಿ ವ್ಯಾಪಾರಸ್ಥರು, ತಕ್ಷಣ ಜಿಲ್ಲಾಡಳಿತ ಸುಸಜ್ಜಿತವಾಗಿ ಅವಕಾಶ ಕಲ್ಪಿಸಿರುವ ಬೈಕಂಪಾಡಿ ಮಾರುಕಟ್ಟೆಗೆ ತಮ್ಮ ವ್ಯಾಪಾರ ವಹಿವಾಟು ಸ್ಥಳಾಂತರಗೊಳಿಸಬೇಕು, ಇಲ್ಲದಿದ್ದಲ್ಲಿ ಎ.ಪಿ.ಎಂ.ಸಿ ಸಮಿತಿಯು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎ.ಪಿ.ಎಂ.ಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಪ್ರಸ್ತುತ ಎ.ಪಿ.ಎಂ.ಸಿ ಕಾಯ್ದೆಯನುಸಾರ ಲೈಸೆನ್ಸ್ ಪಡೆದು ವ್ಯಾಪಾರ ವಹಿವಾಟು ನಡೆಸುತ್ತಿರುವ ಹಣ್ಣು ಮತ್ತು ತರಕಾರಿ ವ್ಯಾಪಾರವನ್ನು ಕೂಡಲೇ ಬೈಕಂಪಾಡಿ ಮಾರುಕಟ್ಟೆಗೆ ಸ್ಥಳಾಂತರಿಸಬೇಕು. ಮುಂದಿನ ದಿನಗಳಲ್ಲಿ ಅನಾವಶ್ಯಕ ಸಮಸ್ಯೆಗಳು ಎದುರಾಗದ ರೀತಿಯಲ್ಲಿ ಮತ್ತು ಸೌಹಾರ್ದದಿಂದ ವ್ಯವಹರಿಸಬೇಕು. ಇಲ್ಲದೇ ಇದ್ದಲ್ಲಿ ಅನಿವಾರ್ಯವಾಗಿ ಕಾನೂನು ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇನ್ನು ಪ್ರಸ್ತುತ ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ವ್ಯಾಪಾರ ವಹಿವಾಟು ನಡೆಸಲು ಸೆಂಟ್ರಲ್ ಮಾರುಕಟ್ಟೆ ತೀರಾ ಕಡಿಮೆ ಇರುವುದರಿಂದ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ಹೆಚ್ಚಿನ ವಾಹನಗಳ ಆಗಮನದಿಂದ ಟ್ರಾಫಿಕ್ ಹೆಚ್ಚಾಗಿ ರೈತರು ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗುವ ಕಾರಣ ಬೈಕಂಪಾಡಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.