ಮಂಗಳೂರು, ಆ. 17, ಕೊರೊನಾ ಕಾರಣದಿಂದಾಗಿ ಶಾಲಾ ಕಾಲೇಜುಗಳು ಹಲವು ತಿಂಗಳುಗಳಿಂದ ಬಂದ್ ಆಗಿವೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳು ಈಗಾಗಲೇ ಪ್ರಾರಂಭವಾಗಿದ್ದು, ಆದರೆ ಹಲವು ಪೋಷಕರು ತಮ್ಮ ಮಕ್ಕಳಿಗೆ ಆನ್‌ಲೈನ್ ತರಗತಿಯಲ್ಲಿ ಬಾಗಿಯಾಗಲು ಬೇಕಾದ ಸ್ಮಾರ್ಟ್ ಫೋನ್ ಹಾಗು ಲ್ಯಾಪ್‌ಟಾಪ್‌ಗಳನ್ನು ಖರೀದಿಸುವಷ್ಟು ಆರ್ಥಿಕವಾಗಿ ಸಬಲರಾಗಿಲ್ಲ. ಮಕ್ಕಳ ಆನ್‌ಲೈನ್ ತರಗತಿಗೆ ಲಾಪ್‌ಟಾಪ್ ಹಾಗೂ ಸ್ಮಾರ್ಟ್ ಫೋನ್ ಖರೀದಿ ಮಾಡಲೆಂದು ಪೋಷಕರು ತಮ್ಮ ವಾಹನ ಮತ್ತು ಆಭರಣಗಳನ್ನು ಅಡವಿಟ್ಟಿರುವ ಉದಾಹರಣೆಗಳು ಈಗಾಗಲೇ ನಮ್ಮ ಕಣ್ಣಮುಂದಿದೆ. ಕೊರೊನಾ ಕಾರಣದಿಂದಾಗಿ ತಮ್ಮ ಉದ್ಯೋಗ ಕಳೆದುಕೊಂಡ ಪೋಷಕರಿಗಂತು ಆನ್‌ಲೈನ್ ತರಗತಿ ಆರಂಭದ ಬಳಿಕ ಮತ್ತಷ್ಟು ಸಂಕಷ್ಟ ಉಂಟಾಗಿದೆ.
ಈ ನಿಟ್ಟಿನಲ್ಲಿ ಹೊಸ ಹೆಜ್ಜೆಯಿಟ್ಟಿರುವ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಭಾಗದಲ್ಲಿ ಕಲಿಯುತ್ತಿರುವ ಇಬ್ಬರು ಯುವ ವಿದ್ಯಾರ್ಥಿಗಳಾದ ಅಮನ್ ರೊಡ್ರಿಗಸ್ ಮತ್ತು ಸುಚೇತಾ ವಿಕ್ರಮ್ ಅವರು ಬಳಸಿದ ಮೊಬೈಲ್‌ಗಳನ್ನು ಸಂಗ್ರಹ ಮಾಡಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ದಾನ ಮಾಡಲು ಆರಂಭಿಸಿದ್ದಾರೆ. ಈ ಅಭಿಯಾನದಲ್ಲಿ ಮಂಗಳೂರಿನ ಜವಾಬ್ದಾರಿಯನ್ನು ಕರಂಗಲ್ಪಾಡಿ ಮೂಲದ ಅಮನ್ ರೊಡ್ರಿಗಸ್ ಅವರು ವಹಿಸಿದ್ದು, ಬೆಂಗಳೂರಿನ ಉಸ್ತುವಾರಿಯನ್ನು ಸುಚೇತಾ ವಿಕ್ರಮ್ ವಹಿಸಿದ್ದಾರೆ.
ಉದ್ಯೋಗ ಕಳೆದುಕೊಂಡು ಅಥವಾ ಆರ್ಥಿಕವಾಗಿ ಬಲಾಢ್ಯರಲ್ಲದ ಹಲವು ಪೋಷಕರು ತಮ್ಮ ಮಕ್ಕಳಿಗೆ ಆನ್‌ಲೈನ್ ತರಗತಿಗಳಿಗಾಗಿ ಮೊಬೈಲ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಗಮನಿಸಿ,ಇನ್ನೊಬ್ಬರು ಬಳಸಿದ ಸ್ಮಾರ್ಟ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನು ಜನರಿಂದ ಸಂಗ್ರಹ ಮಾಡಿ ಅದನ್ನು ಮಕ್ಕಳಿಗೆ ಆನ್‌ಲೈನ್ ಕಲಿಕೆಗಾಗಿ ದಾನ ಮಾಡುತ್ತೇವೆ. ಹಾಗೆಯೇ ತಿಂಗಳಿಗೊಮ್ಮೆ ಅವರು ನಿಜವಾಗಿಯೂ ಫೋನ್ ಬಳಸುತ್ತಾರೋ ಇಲ್ಲವೋ ಎಂದು ಪರಿಶೀಲಿಸುತ್ತೇವೆ ಎಂದು ತಿಳಿಸಿದ್ದಾರೆ. ಒಂದು ವಾರದ ಹಿಂದೆ ನಾವು ಈ ಅಭಿಯಾನವನ್ನು ಆರಂಭ ಮಾಡಿದ್ದು ಮಂಗಳೂರಿನಲ್ಲಿ ನಾಲ್ಕು ಫೋನ್‌ಗಳನ್ನು ದಾನ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಎರಡು ಮೊಬೈಲ್‌ಗಳನ್ನು ನಮ್ಮ ಅಪಾರ್ಟ್‌ಮೆಂಟ್‌ನಲ್ಲಿರುವ ಮನೆ ಕೆಲಸ ಮಾಡುವ ಕುಟುಂಬದ ಮಕ್ಕಳಿಗೆ ಹಾಗೂ ಇನ್ನೆರಡು ಮೊಬೈಲ್‌ಗಳನ್ನು ವೈಟ್ ಡವ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಕೊರಿನ್ ರಸ್ಕಿನ್ಹ ಅವರ ಮುಖೇನ ವೈಟ್ ಡವ್ಸ್ ಸಂಸ್ಥೆಯಲ್ಲಿರುವ ಮಕ್ಕಳಿಗೆ ದಾನ ಮಾಡಲಾಗಿದೆ” ಎಂದು ತಿಳಿಸಿದ್ದಾರೆ. ಉದ್ಯೋಗ ಹೊಂದಿರುವ ಮತ್ತು ಆರ್ಥಿಕವಾಗಿ ಖರೀದಿಸಲು ಶಕ್ತರಾಗಿರುವ ಕುಟುಂಬಕ್ಕೆ ನಾವು ದಾನ ಮಾಡುವುದಿಲ್ಲ. ನಾವು ಅವರ ಆದಾಯವನ್ನು ನೋಡುತ್ತೇವೆ. ಕೆಲಸ ಕಳೆದುಕೊಂಡವರು, ಸಾಕಷ್ಟು ಆದಾಯ ಇಲ್ಲದೇ ಓರ್ವ ಪೋಷಕರು ಇಬ್ಬರು ಮಕ್ಕಳನ್ನು ಬೆಳೆಸುತ್ತಿದ್ದರೆ ಅವರಿಗೆ ಸಹಾಯ ಮಾಡುತ್ತೇವೆ ಎಂದೂ ತಿಳಿಸಿದ್ದಾರೆ.
ಇನ್ನು ಬಳಸಿದ ಸ್ಮಾರ್ಟ್ ಫೋನ್‌ಗಳನ್ನು ದಾನ ಮಾಡಲು ಬಯಸುವವರು ಅಮನ್ ಹಾಗೂ ಸುಚೇತಾ ಅವರನ್ನು ಸಂಪರ್ಕಿಸಬಹುದಾಗಿದೆ.
ಅಮನ್ ರೊಡ್ರಿಗಸ್: +91 8050884563 (ಮಂಗಳೂರು)
ಸುಚೇತಾ ವಿಕ್ರಮ್: +91 9980910055 (ಬೆಂಗಳೂರು)