(ನ್ಯೂಸ್ ಕಡಬ) newskadaba.com ಮಂಗಳೂರು, ಆ,17, ಕೇರಳದಿಂದ ದ.ಕ. ಜಿಲ್ಲೆಗೆ ಪ್ರತೀ ದಿನ ದೈನಂದಿನ ಚಟುವಟಿಕೆಗಳಿಗೆ ಪ್ರಯಾಣಿಸುವ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಗಡಿಭಾಗಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದ್ದು, ಆಗಮಿಸುವವರು ಕಡ್ಡಾಯವಾಗಿ ಪಾಸ್ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ದೈನಂದಿನ ಚಟುವಟಿಕೆಗಳಿಗೆ ಪ್ರತಿದಿನ ಸಂಚರಿಸುವ ಸಾರ್ವಜನಿಕರು ಸ್ಥಳೀಯಾಡಳಿತ ಸಂಸ್ಥೆಗಳಿಂದ ಮಾಸಿಕ ಪಾಸ್ ಪಡೆದಿರಬೇಕು. ಅನಂತರ ಚೆಕ್ ಪೋಸ್ಟ್‌ಗಳಲ್ಲಿ ಒಳಬರುವ ಹಾಗೂ ಹೊರಹೋಗುವ ಸಂದರ್ಭದಲ್ಲಿ ತಮ್ಮ ಮಾಹಿತಿ ಪತ್ರ ತೋರಿಸಬೇಕು ಎಂದಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ಪ್ರತೀದಿನ ವೈದ್ಯಕೀಯ ಸ್ಕ್ರೀನಿಂಗ್ ಹಾಗೂ ಕಾಲಕಾಲಕ್ಕೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ಕೇರಳದಿಂದ ಬಂದು ದ.ಕ. ಜಿಲ್ಲೆಯಲ್ಲಿ ಉಳಿಯಲು ಇಚ್ಛಿಸುವ ಸಾರ್ವಜನಿಕರು ಕಡ್ಡಾಯವಾಗಿ ಸೇವಾ ಸಿಂಧು ವೆಬ್ ಪೋರ್ಟಲ್‌ನಲ್ಲಿ ಪಾಸ್ ಪಡೆದು ತಲಪಾಡಿ ಹಾಗೂ ಜಾಲ್ಸೂರು ಚೆಕ್‌ಪೋಸ್ಟ್ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಪ್ರಯಾಣಿಕರು ಕರ್ನಾಟಕ ಸರಕಾರದ ಕೊರೋನಾ ಮಾರ್ಗಸೂಚಿಗೆ ಬದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.