(ನ್ಯೂಸ್ ಕಡಬ) newskadaba.com ಉಡುಪಿ, ಆ.15, ಖಚಿತ ಮಾಹಿತಿಯ ಪ್ರಕಾರ ಉಡುಪಿ ಡಿಸಿಬಿಐ ಪೊಲೀಸರು ಕಾರ್ಯಾಚರಣೆ ನಡೆಸಿ 1 ಕೆ.ಜಿ.100 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ ಘಟನೆ ಕುಂದಾಪುರದ ಕೋಡಿಯಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಕೋಡಿಯ ಮೊಹಮ್ಮದ್ ಅಬ್ದುಲ್ ರೆಹಮಾನ್ (24) ಎಂದು ಗುರುತಿಸಲಾಗಿದೆ. ಈತ ರಾತ್ರಿ 10 ಗಂಟೆಯ ನಂತರ ವ್ಯಾಪಾರದ ಉದ್ದೇಶದಿಂದ ಮಸೂದ್ ಯಾನೆ ಚಿನ್ನು ಎಂಬವನಿಂದ ಗಾಂಜಾ ತೆಗೆದುಕೊಂಡು ಅವನ ಮನೆಗೆ ಹೋಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದ ಬೆನ್ನಲ್ಲೇ ರಾತ್ರಿ ಕೋಡಿ ಮುಲ್ಲಾ ಸ್ಟ್ರೀಟ್ ನಾಲ್ಕನೇ ಕ್ರಾಸ್ ಬಳಿ ಕಾಯುತ್ತಿರುವಾಗ ಅಬ್ದುಲ್ ರೆಹಮಾನ್ ಕೈಯಲ್ಲಿ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಬಂದಿದ್ದು, ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಆರೋಪಿಯು ತಂದು ಇದನ್ನು ಮನೆಯಲ್ಲಿಟ್ಟು ಮರುದಿನ ಅಧಿಕ ಬೆಲೆಗೆ ಮಾರಾಟ ಮಾಡಲಿಕ್ಕೆ ತೆಗೆದುಕೊಂಡು ಬಂದಿರುವುದಾಗಿ ಅಬ್ದುಲ್ ರೆಹಮಾನ್ ತಿಳಿಸಿದ್ದಾನೆ.
ಆರೋಪಿಯ ವಶದಲ್ಲಿದ್ದ 1 ಕೆ.ಜಿ.100 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಗಾಂಜಾದ ಮೌಲ್ಯ 33,000/- ರೂಪಾಯಿ ಎಂದು ಅಂದಾಜಿಸಲಾಗಿದೆ. ಜೊತೆಗೆ 10,000 ರೂಪಾಯಿ ಮೌಲ್ಯದ ಮೊಬೈಲ್ ಪೋನನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಉಡುಪಿ ಡಿಸಿಐಬಿ ಇನ್ಸ್ ಪೆಕ್ಟರ್ ಮಂಜಪ್ಪ ಡಿ.ಆರ್, ಎ.ಎಸ್.ಐ ರವಿಚಂದ್ರ, ರಾಘವೇಂದ್ರ, ಸಂತೋಷ್ ಕುಂದರ್, ರಾಮು ಹೆಗ್ಡೆ, ಶಿವಾನಂದ, ಸುರೇಶ, ಚಂದ್ರ ಶೆಟ್ಟಿ, ರಾಜಕುಮಾರ, ದಯಾನಂದ ಪ್ರಭು, ಚಾಲಕ ರಾಘವೇಂದ್ರ ಮೊದಲಾದವರು ಭಾಗವಹಿಸಿದ್ದರು.