(ನ್ಯೂಸ್ ಕಡಬ) ಮಂಗಳೂರು, ಆ. 15, ಕೊರೋನಾ ಮಿತಿಮೀರಿದ್ದ ಹಿನ್ನೆಲೆ ಕೇರಳ- ಕರ್ನಾಟಕ ಗಡಿಭಾಗದ ಹಲವು ಕಡೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಹಾಕಿದ್ದ ಮಣ್ಣು ಇದೀಗ ತೆರವುಗೊಳಿಸಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಗಡಿ ಭಾಗದ ನಿರಂತರ ಹೋರಾಟಕ್ಕೆ ಗೆಲುವು ಸಿಕ್ಕಿದಂತಾಗಿದೆ.
ಕರೋಪಾಡಿ ಗ್ರಾಮದಲ್ಲಿ ಹಾಕಲಾಗಿದ್ದ ಮಣ್ಣನ್ನು ಜಿಲ್ಲಾಡಳಿತದ ಸೂಚನೆಯನುಸಾರ ಕರೋಪಾಡಿ ಗ್ರಾಮ ಪಂಚಾಯತ್ ವತಿಯಿಂದ ತೆರವು ಮಾಡಿ ಸಂಚಾರಕ್ಕೆ ಮುಕ್ತ ಅವಕಾಶ ಮಾಡಿಕೊಡಲಾಗಿದೆ. ಇನ್ನು ಉಳಿದಂತೆ ಪ್ರಮುಖ ಗಡಿ ಭಾಗಗಳ ಮಣ್ಣು ತೆರವುಗೊಳಿಸುವ ಮೂಲಕ ಮುಕ್ತ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಪ್ರಾರಂಭದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೇರಳವನ್ನು ಸಂಪರ್ಕ ಕಲ್ಪಿಸುವಂತಹ ಎಲ್ಲಾ ರಸ್ತೆಗಳನ್ನು ಬಂದ್ ಮಾಡುವಂತೆ ಆಗಿನ ಜಿಲ್ಲಾಧಿಕಾರಿ ಸಿಂದೂ ರೂಪೇಶ್ ಅವರು ನೀಡಿದ ಆದೇಶದಂತೆ ಕರೋಪಾಡಿ ಗ್ರಾಮದ ಪೆರೋಡಿ ಕ್ರಾಸ್, ಮುಗುಳಿ, ಬೇತಾ, ಕೋಡ್ಲಾ, ಸೇರಿದಂತೆ ಆರು ಕಡೆಗಳಲ್ಲಿ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಲಾಗಿತ್ತು. ಇನ್ನೂ ಕೆಲವೆಡೆ ಬ್ಯಾರಿಕೇಡ್ ಅಳವಡಿಸಿ, ಮುಚ್ಚಲಾಗಿತ್ತು. ಇನ್ನು ಮುಡಿಪು, ಕೂಟತ್ತಜೆ, ತೌಡುಗೋಳಿ, ಪ್ರದೇಶಗಳಲ್ಲೂ ದ.ಕ. ಜಿಲ್ಲಾಡಳಿತ ವತಿಯಿಂದ ಮಣ್ಣು ತೆರವುಗೊಳಿಸಲಾಗಿದೆ.