(ನ್ಯೂಸ್ ಕಡಬ) newskadaba.com.ಮಂಗಳೂರು,ಆ.14: ಸರ್ಕಾರ ಮತ್ತು ಯುಜಿಸಿ ನಿರ್ದೇಶನ ಪ್ರಕಾರ ರಚಿಸಲಾದ ಮಾರ್ಗಸೂಚಿ ಅನ್ವಯ ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿಯ 2019-20ನೇ ಸಾಲಿನ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಸೆ.16ರಿಂದ 30ರೊಳಗೆ ನಡೆಸಲಾಗುವುದು ಎಂದು ಕುಲಪತಿ ಪ್ರೊ.ಪಿ.ಯಸ್.ಯಡಪಡಿತ್ತಾಯ ತಿಳಿಸಿದ್ದಾರೆ.
ಪರೀಕ್ಷೆಗೂ ಮೊದಲು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ಧಪಡಿಸಲು ಅನುಕೂಲವಾಗುವಂತೆ ಸೆ.1ರಿಂದ 12ರ ತನಕ ಆನ್‌ಲೈನ್/ ಆಫ್‌ಲೈನ್ ತರಗತಿಗಳನ್ನು ನಡೆಸಲು ಅವಕಾಶ ಒದಗಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದುವರೆಗೆ ಶುಲ್ಕ ಪಾವತಿಸದ ಮತ್ತು ಪರೀಕ್ಷೆ ನೋಂದಣಿ ಮಾಡಿಕೊಳ್ಳದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶವಿದೆ. ಇಂತಹ ವಿದ್ಯಾರ್ಥಿಗಳು ಆ.17ರೊಳಗೆ ಸಂಬಂಧಿತ ಕಾಲೇಜು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಬೇಕು ಮತ್ತು ಅಂಕಪಟ್ಟಿ ಪಡೆದುಕೊಳ್ಳುವಾಗ ನಿಗದಿಪಡಿಸಿದ ಶುಲ್ಕ ಪಾವತಿಸಬೇಕು ಎಂದರು.
ಕೊರೊನಾದಿಂದಾಗಿ ಭೂತಾನ್, ಮೇಘಾಲಯ, ಮಣಿಪುರ, ಕೇರಳ ಸಹಿತ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಪರೀಕ್ಷೆ ಬರೆಯಲು ಅನಾನುಕೂಲವಾಗುವ ಹಿನ್ನೆಲೆಯಲ್ಲಿ ಅವರ ರಾಜ್ಯದ ವಿವಿಗಳೊಂದಿಗೆ ಒಡಂಬಡಿಕೆ ಮಾಡಿ ಪರೀಕ್ಷೆ ನಡೆಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು. ಪ್ರಸ್ತಾವಿತ ವ್ಯವಸ್ಥೆಯಡಿ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವರ್ಷ ನಷ್ಟಗೊಳ್ಳಲು ಅವಕಾಶ ನೀಡದೆ ಮುಂದಿನ ದಿನಗಳಲ್ಲಿ ವಿಶೇಷ ಪರೀಕ್ಷೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.