ಹೈಟೆಕ್ ಅಂಗನವಾಡಿ ಕಟ್ಟಡ – “ಅಜ್ಜಿಮನೆ”

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 13 , ಮಕ್ಕಳ ಕಲಿಕೆಯ ಮೊದಲ ಹಂತವಾಗಿರುವ ಅಂಗನವಾಡಿ ಕೇಂದ್ರಗಳು ಪ್ರತಿಭೆಗಳು ಮೊಳಕೆಯೊಡೆಯುವ ತಾಣಗಳು. ಪ್ರತಿಯೊಂದು ಗ್ರಾಮ, ಜನವಸತಿ ಪ್ರದೇಶಗಳಲ್ಲಿರುವ ಈ ಅಂಗನವಾಡಿಗಳು ಇಂದು ಆಯಾ ಪ್ರದೇಶದ ಸರ್ವ ಚಟುವಟಿಕೆಗಳ ಕೇಂದ್ರಸ್ಥಾನಗಳು. ಪೊಲಿಯೋ ಹನಿ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ಲಸಿಕೆ ನೀಡಲು, ಗರ್ಭಿಣಿಯರಿಗೆ, ಬಾಣಂತಿಯರಿಗೆ ಪೌಷ್ಠಿಕ ಆಹಾರ ನೀಡಲು, ಸಾರ್ವಜನಿಕರಿಗೆ ವಿವಿಧ ತರಭೇತಿ, ಮಾಹಿತಿ ನೀಡುವ ಕಾರ್ಯಕ್ರಮಗಳು, ಚುನಾವಣಾ ಗುರುತಿನ ಚೀಟಿ ನೀಡಲು, ವಿವಿಧ ಸಣ್ಣ ಮಟ್ಟದ ಸರಕರಿ ಕಾರ್ಯಕ್ರಮಗಳಿಗೆ ಈ ಅಂಗನವಾಡಿಗಳೇ ಪ್ರಮುಖ ತಾಣವಾಗಿದೆ.


ಹೀಗಿದ್ದೂ, ಅಂಗನವಾಡಿಗಳ ಮೂಲ ಉದ್ದೇಶವಾಗಿರುವ ಚಿಣ್ಣರ ಆಟ ಪಾಠಗಳಿಗೆ ಅಂಗನವಾಡಿಗಳು ಸದಾ ಸಿದ್ಧವಾಗಿವೆ. ಚಿಕ್ಕಮಕ್ಕಳಿಗೆ ಮೂಲಭೂತ ವಿದ್ಯೆಯನ್ನು ಕಲಿಸುವ ಕೇಂದ್ರವಾಗಿದ್ದು, ಇಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಬೇಕಾದಂತ ಮೂಲಸೌಕರ್ಯಗಳನ್ನು ಒದಗಿಸಿ ಮಕ್ಕಳಿಗೆ ಬೆಳೆಯಲು ಸದವಕಾಶವನ್ನು ಕಲ್ಪಿಸಿ ಕೊಡುವ ಒಂದು ಸಮಸ್ತಿಯಲ್ಲಿ ಯೋಚಿಸಿ ಮಾದರಿ ಅಂಗನವಾಡಿ ಕಟ್ಟಡ ನಿರ್ಮಿಸುವ ಸಲುವಾಗಿ ಅಂದಿನ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕರಾಗಿದ್ದ ಡಾ.ಎಂ.ಆರ್. ರವಿ ಅವರು ನಿರ್ಮಿತಿ ಕೇಂದ್ರಕ್ಕೆ ಈ ಬಗ್ಗೆ ಒಂದು ಯೋಜನಾ ವರದಿಯನ್ನು ಸಲ್ಲಿಸಲು ಸೂಚಿಸಿದ್ದರು.
ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ತನ್ನ ತಂಡದೊಂದಿಗೆ ಈಗಾಗಲೇ ಜಿಲ್ಲೆಯಲ್ಲಿ ಸುಮಾರು 22 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿದ್ದು, ಇದರ ಅನುಭವದಿಂದ ಮಾದರಿ ಅಂಗನವಾಡಿ ಕಟ್ಟಡಕ್ಕೆ “ಅಜ್ಜಿಮನೆ” ಎಂಬ ಯೋಜನಾ ವರದಿಯನ್ನು ತಯಾರಿಸಲಾಯಿತು. ಈ ಯೋಜನೆಗೆ ಸಿಎಸ್‍ಆರ್ ಅಡಿ ಅನುದಾನ ನೀಡಲು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಎಂಆರ್‍ ಪಿಎಲ್‍ಗೆ ಕೋರಿಕೆ ಸಲ್ಲಿಸಿದರು. ಇದನ್ನು ಪರಿಗಣಿಸಿ ಮಂಗಳೂರು ತಾಲೂಕಿನಲ್ಲಿ ಮೂರು ಅಂಗನವಾಡಿಗಳನ್ನು ನಿರ್ಮಿಸಲು ಎಂಆರ್‍ ಪಿಎಲ್ ಸಂಸ್ಥೆಯು ಅನುಮೋದನೆ ನೀಡಿತು.
ಅದರಂತೆ ಮಂಗಳೂರು ದಕ್ಷಿಣ ಕ್ಷೇತ್ರದ ಬೆಂಗರೆ, ಮಂಗಳೂರು ಉತ್ತರ ಕ್ಷೇತ್ರದ ಕಾಟಿಪಳ್ಳ ಹಾಗೂ ಮೂಡಬಿದ್ರೆ ಕ್ಷೇತ್ರದ ಮೂಡುಶೆಡ್ಡೆ ಎದುರುಪದವಿನಲ್ಲಿ “ಅಜ್ಜಿಮನೆ” ಅಂಗನವಾಡಿ ನಿರ್ಮಿಸಲು ಕಾಮಗಾರಿ ಪ್ರಾರಂಭಿಸಲಾಯಿತು.

Also Read  ಕೊರೋನ ಭೀತಿ ಹಿನ್ನೆಲೆ: ಮನಪಾ ವ್ಯಾಪ್ತಿಯ ಎಲ್ಲ ಸೆಲೂನ್, ಬ್ಯೂಟಿ ಪಾರ್ಲರ್ ನಾಳೆಯಿಂದ ಬಂದ್

ಈ ಅಂಗನವಾಡಿ ಕಟ್ಟಡಗಳ ನಿರ್ಮಾಣ, ವಿನ್ಯಾಸವನ್ನು ಬಹಳ ನಾಜೂಕಿನಿಂದ ಆಕರ್ಷಕ ರೀತಿಯಲ್ಲಿ ಮಾಡಲಾಗಿದೆ. ಯಾವುದೇ ಹೈಟೆಕ್ ಕಿಂಡರ್ ಗಾರ್ಡನ್ ನರ್ಸರಿಗಳನ್ನು ಮೀರಿಸುವಂತೆ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸ ಮಾಡಲಾಗಿದೆ. ಕಟ್ಟಡದಲ್ಲಿ ಮಕ್ಕಳಿಗೆ ಅಜ್ಜಿ ಮನೆಗೆ ಹೋದ ಭಾವನೆ ಬರುವಂತೆ ಅಲ್ಲಿ ಆಟವಾಡಲು ಅಂಗಳ, ಮಲಗಲು ಕೋಣೆ, ಅಡಿಗೆ ಮನೆ, ಚಾವಡಿ, ಶೌಚಾಲಯ ನಿರ್ಮಸಲಾಗಿದೆ. ಅಜ್ಜಿಮನೆ ಅಂಗನವಾಡಿಯ ಹೊರ ಆವರಣದಲ್ಲಿ ಪುಷ್ಪ ಉದ್ಯಾನವನ, ಎರೆಹುಳ ಗೊಬ್ಬರ ಘಟಕ, ಮಳೆ ನೀರು ಕೊಯ್ಲು ವ್ಯವಸ್ಥೆ ಅಲ್ಲದೆ ಸೋಲಾರ್ ದೀಪದೊಂದಿಗೆ ಸುಸಜ್ಜಿತ ಕಟ್ಟಡವನ್ನು 3 ಕಡೆಗಳಲ್ಲಿ ನಿರ್ಮಿಸಲಾಗಿದೆ. ಇಡೀ ಕಾಮಗಾರಿಯ ಸಂಪೂರ್ಣ ವೆಚ್ಚ ಸುಮಾರು ರೂ. 25 ಲಕ್ಷ ಮೊತ್ತದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.
ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಕನ್ನಡ ಮತ್ತು ಇಂಗ್ಲೀಷ್‍ನಲ್ಲಿ ಗೋಡೆ ಬರಹ ಮತ್ತು ಗ್ರಾಮೀಣ ಚಿತ್ರಕಲೆ ಮಾಡಲಾಗಿದೆ. ಕಟ್ಟಡದ ವಿದ್ಯುತ್‍ಗೆ ಎಲ್‍ಇಡಿ ದೀಪ ಅಳವಡಿಸಲಾಗಿದೆ. ಎರೆಹುಳ ಘಟಕದಿಂದ ಬರುವ ಗೊಬ್ಬರ ಬಳಸಿ ತರಕಾರಿ ಗಿಡಗಳನ್ನು ಬೆಳೆಯಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಸುರಕ್ಷತೆಗಾಗಿ ಕಟ್ಟಡದ ಸುತ್ತ ಆವರಣಗೋಡೆ ನಿರ್ಮಿಸಲಾಗಿದ್ದು ಮಕ್ಕಳು ಸ್ವಚ್ಛಂದವಾಗಿ ಆವರಣದೊಳಗೆ ಸಂಚರಿಸಬಹುದಾಗಿದೆ. ಮಕ್ಕಳಿಗೆ ಆಟ ಯಾವಾಗಲು ಮೊದಲ ಪ್ರಾಶಸ್ತ್ಯ. ಈ ನಿಟ್ಟಿನಲ್ಲಿ ಅಜ್ಜಿಮನೆ ಅಂಗನವಾಡಿ ಕೇಂದ್ರದಲ್ಲಿ ಆಟವಾಡಲು ಸ್ಥಳವಕಾಶ ಹಾಗೂ ಜಾರುಬಂಡಿ ಸೇರಿದಂತೆ ಆಕರ್ಷಕ ಆಟದ ತಾಣಗಳನ್ನು ಅಳವಡಿಸಲಾಗಿದೆ.  ಅಜ್ಜಿಮನೆ ಅಂಗನವಾಡಿ ಕೇಂದ್ರದ ವಿನ್ಯಾಸವನ್ನು ಭರತ್‍ರಾಮ್ ಜೆಪ್ಪು, ಗ್ರೀನ್‍ಮಾರ್ಕ್ ವಾಸ್ತುಶಿಲ್ಪ ಮತ್ತು ಒಳಾಂಗಣ ವಿನ್ಯಾಸ ಇವರು ಮಾಡಿದ್ದು, ನಿರ್ಮಿತಿ ಕೇಂದ್ರದ ಸಹಾಯಕ ಇಂಜಿನಿಯರ್ ನವಿತ್ ಇವರ ಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆಸಲಾಗಿದೆ.
ಬೆಂಗರೆ ಅಂಗನವಾಡಿ ಕೇಂದ್ರದ ಉದ್ಘಾಟನೆ ಇತ್ತೀಚೆಗೆ ನೆರವೇರಿದ್ದು, ಕಾಟಿಪಳ್ಳ ಹಾಗೂ ಎದುರುಪದವು ಅಂಗನವಾಡಿ ಕೇಂದ್ರಗಳ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಜ್ಜಾಗಿವೆ.

Also Read  ಕುಂದಾಪುರ: ಬೈಕ್ ಢಿಕ್ಕಿ ಹೊಡೆದು ಮಹಿಳೆ ಮೃತ್ಯು

error: Content is protected !!
Scroll to Top