(ನ್ಯೂಸ್ ಕಡಬ) newskadaba.com ಮಂಗಳೂರು, ಜು.26, ಟೀಮ್ ಅಲ್-ಹಕ್ ಫೌಂಡೇಶನ್, ಕಸೈಗಲ್ಲಿಯ ಎಸ್‌ಎಂಎನ್‌ಎ ಗ್ರೂಪ್, ಅಶ್ರಫ್ (ಭಯ್ಯಾ) ಮತ್ತು ಝಾಕಿರ್ ಹುಸೈನ್( ಜಾಕಿ) ಹಾಗೂ ಝಾಕಿರ್ ಭಾಯ್ ಅವರನ್ನೊಳಗೊಂಡ ತಂಡದ ಸುಮಾರು 50ಕ್ಕೂ ಅಧಿಕ ಮಂದಿ ಯುವಕರು ನಗರದ ಬಂದರ್ ಝೀನತ್ ಬಕ್ಷ್ ಜುಮ್ಮಾ ಮಸೀದಿಯ ಆವರಣದ ದಫನ ಭೂಮಿಯಲ್ಲಿ ಕಳೆದ ಐದು ದಿನದಿಂದ ಶ್ರಮದಾನ ಮಾಡುವ ಮೂಲಕ ಸ್ಥಳೀಯರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಕೇಂದ್ರ ಜುಮಾ ಮಸ್ಜಿದ್‌ನ ಆಡಳಿತ ಕಮಿಟಿಯ ಸಹಕಾರದಿಂದ ಅಲ್-ಹಕ್ ಫೌಂಡೇಶನ್‌ನ ಸದಸ್ಯ ಇರ್ಫಾನ್ ಅವರ ನೇತೃತ್ವದಲ್ಲಿ ಯುವಕರು ಸತತ ಐದು ದಿನದಿಂದ ದಫನ ಭೂಮಿಯಲ್ಲಿ ಬೆಳೆದಿರುವ ಬೃಹತ್ ಮರಗಳು ಮತ್ತು ಗಿಡಗಂಟಿಗಳನ್ನು ಕಡಿದು ತೆರವುಗೊಳಿಸಿದರಲ್ಲದೆ, ನೆಲವನ್ನು ಸಮತಟ್ಟುಗೊಳಿಸಿದರು. ರಸ್ತೆ ಇಲ್ಲದ ಕಾರಣ ಈ ದಫನ ಭೂಮಿಯೊಳಗೆ ಯಾವುದೇ ವಾಹನ, ಜೆಸಿಬಿ ಪ್ರವೇಶಿಸಲು ಸಾಧ್ಯವಿಲ್ಲವಾದರೂ ಬೃಹತ್ ಮರಗಳನ್ನು ಕಡಿದು ಹೊತ್ತು ಹೊರಗೆ ಸಾಗಿಸಿದರು. ಶ್ರಮದಾನದ ಸಂದರ್ಭ ವಿಷಪೂರಿತ ಹಾವುಗಳ ಓಡಾಟ ಕಂಡು ಬಂದರೂ ಧೃತಿಗೆಡದೆ ಕೆಲಸ ನಿರ್ವಹಿಸಿದರು. ಈಗಾಗಲೆ ಕೊರೋನಾ ಸೋಂಕಿತ ಮೂವರ ಮೃತದೇಹಗಳನ್ನು ದಫನ ಕಾರ್ಯ ನೆರವೇರಿಸಿರುವ ಈ ತಂಡ ಇದೀಗ ಪೂರ್ವಭಾವಿಯಾಗಿ ದಫನ ಗುಂಡಿ ತೋಡುವ ಕಾರ್ಯವನ್ನು ಕೂಡ ಮಾಡುತ್ತಿವೆ. ಇದು ಪುರಾತನ ದಫನ ಭೂಮಿಗಳಲ್ಲಿ ಒಂದಾಗಿದೆ. ಹಲವು ವರ್ಷಗಳಿಂದ ಈ ದಫನ ಭೂಮಿಯಲ್ಲಿ ಬೃಹತ್ ಮರಗಳು ಮತ್ತು ಗಿಡಗಂಟಿಗಳು ಬೆಳೆದು ನಿಂತಿತ್ತು. ಇಲ್ಲಿನ ಉತ್ಸಾಹಿ ಯುವಕರು ಕಳೆದ ಐದು ದಿನದಿಂದ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಶ್ರಮಕ್ಕೆ ಸ್ಥಳೀಯ ಕಾರ್ಪೊರೇಟರ್‌ಗಳಾದ ಸಂಶುದ್ದೀನ್ ಕುದ್ರೋಳಿ ಮತ್ತು ಲತೀಫ್ ಕಂದುಕ ಸಹಕರಿಸಿದ್ದಾರೆ ಎಂದು ಅಲ್‌ಹಕ್ ಫೌಂಡೇಶನ್‌ನ ಅಧ್ಯಕ್ಷ ಇಮ್ತಿಯಾಝ್ ಬಿಎಸ್ ತಿಳಿಸಿದ್ದಾರೆ.