ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಕೊಲೆಗೈದ ಪಾಪಿ ➤ ಮೃತದೇಹವನ್ನು ಸುಡಲೆತ್ನಿಸಿದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಾಪು, ಜು.25, ಕುಡಿದ ಮತ್ತಿನಲ್ಲಿ ಸ್ನೇಹಿತನನ್ನೇ ಹತ್ಯೆಗೈದು ಮೃತದೇಹವನ್ನು ಮನೆಯಂಗಳದಲ್ಲಿ ಸುಡಲು ಯತ್ನಿಸಿದ ಘಟನೆ ಶಿರ್ವ ಠಾಣಾ ವ್ಯಾಪ್ತಿಯ ಪುಂಚಲಕಾಡು ಎಂಬಲ್ಲಿ ನಡೆದಿದೆ.

ಮೃತರನ್ನು ಎರ್ಮಾಳ್ ನಿವಾಸಿ ಹೇಮಂತ್ ಪೂಜಾರಿ(45) ಎಂದು ತಿಳಿದು ಬಂದಿದೆ. ಆತನ ಸ್ನೇಹಿತನಾದ ಅಲ್ಬನ್ ಡಿಸೋಜ (50)ಕೊಲೆ ಆರೋಪಿ. ಕೊಲೆ ನಡೆದ ವಿಚಾರ ಶುಕ್ರವಾರ ಸಂಜೆಯ ವೇಳೆ ಬೆಳಕಿಗೆ ಬಂದಿದೆ.

ಹೇಮಂತ್ ಮತ್ತು ಅಲ್ಬನ್ ಡಿಸೋಜ ಸ್ನೇಹಿತರಾಗಿದ್ದರು. ಶುಕ್ರವಾರ ಬೆಳಗ್ಗೆ ಕಾಪುವಿನ ಬಾರ್‌ ನಲ್ಲಿ ಮದ್ಯ ಸೇವಿಸಿ ಪುಂಚಲಕಾಡಿನಲ್ಲಿರುವ ತನ್ನ ಸ್ನೇಹಿತ ಅಲ್ಬನ್ ಡಿಸೋಜನ ಮನೆಗೆ ಹೇಮಂತ್ ಪೂಜಾರಿ ತೆರಳಿದ್ದಾರೆ ಎನ್ನಲಾಗಿದೆ. ಅಲ್ಲಿ ಸುಮಾರು 11 ಗಂಟೆಗೆ ಇವರಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಈ ವೇಳೆ ಕೋಪಗೊಂಡ ಆರೋಪಿ ಅಲ್ಬನ್ ಕಟ್ಟಿಗೆಯಿಂದ ಹೊಡೆದು ಹೇಮಂತ್ ಪೂಜಾರಿಯನ್ನು ಕೊಲೆಗೈದಿರುವುದಾಗಿ ಹೇಳಲಾಗಿದೆ. ಈ ಕೊಲೆಯನ್ನು ಮುಚ್ಚಿ ಹಾಕಲೆತ್ನಿಸಿದ ಆರೋಪಿಯು ತನ್ನ ಮನೆಯ ಬಳಿ ಹೇಮಂತ್‌ರ ಮೃತದೇಹವನ್ನು ಕಟ್ಟಿಗೆಯನ್ನು ಬಳಸಿ ಸುಡಲು ಯತ್ನಿಸಿದ್ದಾನೆ. ಈ ವೇಳೆ ಭಾರೀ ಹೊಗೆ ಹಾಗೂ ಸುಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮೃತದೇಹ ಅರ್ಧ ಸುಟ್ಟಿತ್ತೆನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಲ್ಬನ್ ಡಿಸೋಜನನ್ನು ಪೊಲೀಸರು ಬಂಧಿಸಿದ್ದಾರೆ.

Also Read  ಸುಳ್ಯ: ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ರವರಿಗೆ ಶ್ರದ್ಧಾಂಜಲಿ ಸಭೆ

error: Content is protected !!
Scroll to Top