(ನ್ಯೂಸ್ ಕಡಬ) newskadaba.com ಮಂಗಳೂರು: ಜು.21, ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಕೋವಿಡ್ ಸೋಂಕಿತರೆಂಬ ಕಾರಣಕ್ಕೆ ಗರ್ಭಿಣಿಯರಿಗೆ ಚಿಕಿತ್ಸೆ ನೀಡದೆ ಬೇರೆಡೆಗೆ ಕಳುಹಿಸುವಂತಿಲ್ಲ. ಹೆರಿಗೆ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳು ಸತಾಯಿಸದೆ ಹೆರಿಗೆ ಮಾಡಿಸಲು ಕ್ರಮ ವಹಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಡಕ್ ಸೂಚನೆ ನೀಡಿದ್ದಾರೆ.
ಸೋಮವಾರ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಗರ್ಭಿಣಿಯರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸತಾಯಿಸಿದರೆ ಅಥವಾ ನಿರಾಕರಿಸಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವ್ಯವಸ್ಥಿತವಾಗಿ ಹೆರಿಗೆ ಮಾಡಿಸಲು ಆಯಾ ಆಸ್ಪತ್ರೆಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು ಇಂತಹ ಪ್ರಕರಣಗಳಲ್ಲಿ ವಿಳಂಬವನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಂತ್ರಿಗಳು ಅಭಿಪ್ರಾಯ ಪಟ್ಟರು.
ನೆಲ್ಯಾಡಿಯ ಗರ್ಭಿಣಿಯೊಬ್ಬರು ಚಿಕಿತ್ಸೆಗಾಗಿ ದಿನಪೂರ್ತಿ ಅಲೆದಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಘಟನೆಯ ಕುರಿತು ತನಿಖೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಸಕಾಲದಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲು ವಿಳಂಬಿಸಿದ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸಲಾಗುವುದು ಎಂದ ಸಚಿವರು, ಆವಶ್ಯವೆನಿಸಿದರೆ ಕರ್ತವ್ಯ ಲೋಪ ಎಸಗಿದವರನ್ನು ಸೇವೆಯಿಂದ ಅಮಾನತು ಮಾಡಲು ಹಿಂಜರಿಯುವುದಿಲ್ಲ ಎಂದವರು ಎಚ್ಚರಿಸಿದರು. ನೆಲ್ಯಾಡಿಯ ಮಹಿಳೆಗೆ ಕೂಡಲೇ ಅಗತ್ಯ ಚಿಕಿತ್ಸೆ ನೀಡುವಂತೆ ಸಚಿವರು ತಿಳಿಸಿದರು.
ಲೇಡಿಗೋಷನ್ ಆಸ್ಪತ್ರೆಯಲ್ಲಿ ಕೋವಿಡ್ ಶಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡುಗಳ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು. ವೆನ್ಲಾಕ್‌ನಲ್ಲಿ ವೈದ್ಯರು ಪರಸ್ಪರ ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ರೋಗಿಗಳಿಗೆ ಸಕಾಲಕ್ಕೆ ಊಟ ತಿಂಡಿ ಒದಗಿಸ ಬೇಕು. ಉಪಹಾರದಲ್ಲಿ ದಿನನಿತ್ಯ ಬದಲಾವಣೆ ತರಬೇಕು. ಅಗತ್ಯ ಇರುವವರಿಗೆ ಹೆಚ್ಚುವರಿ ಉಪಹಾರ ಒದಗಿಸಬೇಕು ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು. ವೆನ್ಲಾಕ್ ಐಸಿಯು ಕೊಠಡಿಗಳ ವಿಸ್ತರಣೆ ಹಾಗೂ ಹೆಚ್ಚುವರಿ ವೆಂಟಿಲೇಟರ್‌ಗಳನ್ನು ಅಳವಡಿಸಲು ಕೂಡಲೇ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ ಸಚಿವರು ಹೆಚ್ಚುವರಿ ಪಿಪಿಇ ಕಿಟ್, ಎನ್ 95 ಮಾಸ್ಕ್‌ಗಳನ್ನು ಬೇಡಿಕೆಯಷ್ಟು ಒದಗಿಸಲಾಗುವುದು. ಇನ್ನಷ್ಟು ವೈದ್ಯರು, ಪ್ರಯೋಗಾಲಯ ತಂತ್ರಜ್ಞರು, ‘ಡಿ’ ಗ್ರೂಪ್ ಸಿಬ್ಬಂದಿಗಳ ನೇಮಕ, ಆಂಬುಲೆನ್ಸ್‌ಗಳ ಖರೀದಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರಕಾರ ವಿಳಂಬಿಸದೆ ಅನುಮೋದನೆ ನೀಡಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಮಾತನಾಡಿ, ವೆನ್ಲಾಕ್ ಆಸ್ಪತ್ರೆಯಲ್ಲಿ ಗೊಂದಲ ಉಂಟಾಗದಂತೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು. ಲೋಪ ಎಸಗುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು. ಶಾಸಕ ವೇದವ್ಯಾಸ ಕಾಮತ್, ವೆನ್ಲಾಕ್ ಆಸ್ಪತ್ರೆ ಡಿಎಂಒ ಡಾ.ಸದಾಶಿವ, ಲೇಡಿಗೋಷನ್ ಆಸ್ಪತ್ರೆಯ ಅಕ್ಷಕಿ ಡಾ.ಸವಿತಾ ಉಪಸ್ಥಿತರಿದ್ದರು.