ಕಲ್ಲುಗುಡ್ಡೆ: ಮದ್ಯದಂಗಡಿ ವಿರೋಧಿಸಿ ಜಮಾಯಿಸಿದ ಗ್ರಾಮಸ್ಥರು ► ನಾಳೆ‌ ಕಡಬ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಸುಪ್ರೀಂ ಕೋರ್ಟ್ ಆದೇಶದನ್ವಯ ನೆಲ್ಯಾಡಿ ಹೆದ್ದಾರಿ ಬದಿಯಲ್ಲಿನ ಬಾರನ್ನು ಇಲ್ಲಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಎಂಬಲ್ಲಿಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಸ್ಥಳೀಯರು ಜಮಾಯಿಸಿದ್ದು, ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಪರಿಸ್ಥಿತಿ ಶಾಂತವಾದ ಘಟನೆ ಭಾನುವಾರ ಸಂಜೆ ಕಲ್ಲುಗುಡ್ಡೆಯಲ್ಲಿ ನಡೆದಿದೆ.

ಕಲ್ಲುಗುಡ್ಡೆಯಲ್ಲಿ ಸ್ಥಳೀಯರ ವಿರೋಧದ ನಡುವೆಯೂ ಬಾರನ್ನು ತೆರೆಯಲು ಕೆಲವರು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದು, ಅದರಂತೆ ಶನಿವಾರ ತಡರಾತ್ರಿ ಮದ್ಯವನ್ನು ದಾಸ್ತಾನು ಮಾಡಲಾಗಿದೆ‌ ಎಂದು ಸ್ಥಳೀಯರು ಆರೋಪಿಸಿ ಭಾನುವಾರ ಸಂಜೆ ವೇಳೆ ಸ್ಥಳದಲ್ಲಿ ಜಮಾಯಿಸತೊಡಗಿದರು. ವಿಷಯ ತಿಳಿದ‌ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಕಾನೂನನ್ನು ಕೈಗೆತ್ತಿಕೊಳ್ಳದೆ ಕಾನೂನಾತ್ಮಕವಾಗಿ ಪ್ರತಿಭಟನೆ ನಡೆಸುವಂತೆ ನೆರೆದಿದ್ದವರಲ್ಲಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಕಡಬ ತಹಶಿಲ್ದಾರ್ ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಕರೆ ನೀಡಿದರು. ಈ ಸಂದರ್ಭದಲ್ಲಿ ಕುಟ್ರುಪ್ಪಾಡಿ ತಾಲೂಕು ಪಂಚಾಯತ್ ಸದಸ್ಯ, ಜನಜಾಗೃತಿ ವೇದಿಕೆಯ ಕಡಬ ವಲಯಾಧ್ಯಕ್ಷ ಗಣೇಶ್ ಕೈಕುರೆ, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸಾಂತಪ್ಪ ಗೌಡ, ದಲಿತ ಸಂಘದ ಪುತ್ತೂರು ತಾಲೂಕು ಸಂಚಾಲಕಿ ಸುಂದರಿ, ಬಿಜೆಪಿ ಗ್ರಾಮದ ಸಮಿತಿ ಅಧ್ಯಕ್ಷ ಚಂದ್ರಶೇಖರ ಹಳೆನೂಜಿ ಮೊದಲಾದವರು ಯಾವುದೇ ಕಾರಣಕ್ಕೂ ಈ ಪ್ರದೇಶಕ್ಕೆ ಮದ್ಯದಂಗಡಿ ಬರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

error: Content is protected !!

Join the Group

Join WhatsApp Group