➤➤ ವಿಶೇಷ ಲೇಖನ ಜನರು ಭೀತಿ ಸರಿಸಿ ಮೃತದೇಹಗಳನ್ನು ಸಂತೈಸಬೇಕು…‼ ✍? ಇಸ್ಮಾಯಿಲ್ ಮಾಲೆಂಗ್ರಿ Nsm

(ನ್ಯೂಸ್ ಕಡಬ) newskadaba.com ಕೊರೋನ ಸೋಂಕಿನಿಂದ ಮೃತರಾದವರ ಅಂತ್ಯ ಸಂಸ್ಕಾರ ನಡೆಸಲು ಜನರು ಭಯಗೊಂಡು ಹಿಂಜರಿಯುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಬಳ್ಳಾರಿಯಲ್ಲಿ covid-19 ಬಾಧಿಸಿ ಮರಣ ಹೊಂದಿದ ಮೃತ ದೇಹಗಳನ್ನು ಒಂದೇ ಗುಂಡಿಯಲ್ಲಿ ಅಮಾನವೀಯವಾಗಿ ಅಂತ್ಯ ಸಂಸ್ಕಾರ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಇದು ಒಂದು ಘಟನೆ ಅಲ್ಲ, ಇಂತಹದೇ ಇನ್ನೊಂದು ಮನಕಲಕುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಇದೆಲ್ಲ ನಡೆಯುತ್ತಿರುವುದು ಎಲ್ಲೋ ಉತ್ತರ ಭಾರತದಲ್ಲಲ್ಲ, ನಮ್ಮ ಕರ್ನಾಟಕದಲ್ಲಿ ಎನ್ನುವುದು ಖೇದಕರ ಸಂಗತಿ.

ಯಾದಗಿರಿಯಲ್ಲಿ ಕೊರೋನ ಸೋಂಕಿನಿಂದ ಮೃತ ಹೊಂದಿದ ವ್ಯಕ್ತಿಯ ಮೃತ ಶರೀರವನ್ನು ಆಂಬುಲೆನ್ಸ್ ನಿಂದ ಇಳಿಸಿ ಎಳೆದಾಡಿಕೊಂಡು ಬಂದು ಅಂತ್ಯ ಸಂಸ್ಕಾರ ಮಾಡಿರುವ ಬಗ್ಗೆ ವರದಿಯಾಗಿದೆ. ಅದೆಲ್ಲ ನಡೆದಿರುವುದು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿದೆ.

ಚೆನ್ನೈಯಲ್ಲಿ ಕೊರೋನಾದಿಂದ ಮೃತ ಹೊಂದಿದ ಹಿರಿಯ ವೈದ್ಯರ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಿ ಕಲ್ಲು ತೂರಿದ ಘಟನೆಗಳಿವೆ. ಹಾಗೆಯೇ ನಮ್ಮ ಮಂಗಳೂರಿನಲ್ಲಿ ಕೊರೋನ ಸೋಂಕಿನಿಂದ ಮೃತ ಹೊಂದಿದ ವೃದ್ಧ ಮಹಿಳೆಯ ಶವ ಸಂಸ್ಕಾರ ಮಾಡಲು ಸ್ಥಳವನ್ನು ನೀಡದೆ ಸತಾಯಿಸಿದ ಘಟನೆ ನಮ್ಮ ಕಣ್ಣ ಮುಂದಿದೆ. ಹಾಗೆ ಕುಟುಂಬಿಕರು ಅಂತ್ಯ ಸಂಸ್ಕಾರ ಮಾಡದಿದ್ದ ಸಂದರ್ಭಗಳಲ್ಲಿ ಅನ್ಯ ಧರ್ಮೀಯರು, ಸ್ನೇಹಿತರು ಮುಂತಾದವರು ಶವ ಸಂಸ್ಕಾರ ಮಾಡಿರುವ ಬಗ್ಗೆಯೂ ವರದಿಗಳಾಗಿವೆ.

Also Read  ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ.

ಕೊರೋನ ಸೋಂಕಿನಿಂದ ಮೃತ ಹೊಂದಿದ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡುವ ಬಗ್ಗೆ ಜನರಿಗೆ ಇರುವ ಮಾಹಿತಿಯ ಕೊರತೆ ಮತ್ತು ಹಲವು ತಪ್ಪು ಕಲ್ಪನೆಗಳಿಂದ ಇಂತಹ ಸನ್ನಿವೇಶಗಳಿಗೆ ಕಾರಣವಾಗುತ್ತಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತುರ್ತು ವೈದ್ಯಕೀಯ ಪರಿಹಾರ ವಿಭಾಗ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO)ಕೊರೋನಾ ಸೋಂಕಿತರ ಶವ ಸಂಸ್ಕಾರ ಯಾವ ರೀತಿ ಸುರಕ್ಷಿತ ಶವ ಸಂಸ್ಕಾರ ಮತ್ತು ನಿಯಂತ್ರಣ. ಎಂಬುದರ ಬಗ್ಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆದರೆ ಸರಕಾರ ಇದನ್ನು ಸಾಮಾನ್ಯ ಜನರಿಗೆ ಮನದಟ್ಟು ಮಾಡಿಸುವಲ್ಲಿ ವಿಫಲವಾಗಿದೆ. ಕೊರೋನ ಪೀಡಿತರಾಗಿ ಮರಣ ಹೊಂದಿದ ಶರೀರದಿಂದ ಸೋಂಕು ಹರಡುವುದಿಲ್ಲವೆಂದು ರೋಗಿಯ ಅಂತ್ಯ ಸಂಸ್ಕಾರವನ್ನು ರೋಗಿಯ ಮತೀಯ, ಸಾಮಾಜಿಕ ಅಥವಾ ಕುಟುಂಬದ ಸಂಪ್ರದಾಯಗಳಿಗೆ ಚ್ಯುತಿಯಾಗದಂತೆ ಕೆಲವೊಂದು ಎಚ್ಚರಿಕೆಗಳನ್ನು ವಹಿಸಿ ಅಂತ್ಯ ಸಂಸ್ಕಾರ ನಡೆಸಬಹುದೆಂದು ಸ್ಪಷ್ಟವಾಗಿ ಹೇಳಲಾಗಿದೆ.

ನಮ್ಮ ದೇಶದಲ್ಲಿ ದಿನ ನಿತ್ಯ ಹಲವು ಕೊರೋನಾ ರೋಗಿಗಳ ಸಾವುಗಳಾಗುತ್ತಿದೆ, ಮೃತರಿಗೆ ಅವರವರ ಸಂಪ್ರದಾಯಗಳಿಗೆ ಅನುಗುಣವಾಗಿ ಅಂತ್ಯ ಕ್ರಿಯೆ ನಡೆಸುವ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟವಾದ ಮಾಹಿತಿಯಿದ್ದರೆ ಯಾವುದೇ ಗೊಂದಲ, ಆತಂತಕಗಳಿಲ್ಲದೆ ಅಂತ್ಯ ಸಂಸ್ಕಾರ ಮಾಡಬಹುದು. ಕುಟುಂಬದ ಸಂಪ್ರದಾಯಗಳಿಗೆ ಅನುಸಾರವಾಗಿ ಮೃತ ದೇಹವನ್ನು ವೀಕ್ಷಿಸಲು ಅವಕಾಶ ನೀಡಬಹುದು. ಆದರೆ ಸ್ಪರ್ಶಿಸುವುದಕ್ಕೆ ಅವಕಾಶವಿಲ್ಲ, ಮೃತ ದೇಹವನ್ನು ವೀಕ್ಷಿಸುವಾಗ ಪರಸ್ಪರ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು. ಶ್ವಾಸಕೋಶದ ಸಮಸ್ಯೆಯುಳ್ಳವರು ಮೃತ ದೇಹವನ್ನು ವೀಕ್ಷಿಸುವುದಿದ್ದರೆ ಮುಖಕವಚವನ್ನು ಧರಿಸುವುದು ಒಳ್ಳೆಯದು‌. ಮೃತ ದೇಹವನ್ನು ವೀಕ್ಷಿಸಿದವರೆಲ್ಲರೂ ಆ ಬಳಿಕ ತಮ್ಮ ಕೈಗಳನ್ನು ಸೋಪು ಅಥವಾ ಸ್ಯಾನಿಟೈಸರ್ ನಿಂದ ತೊಳೆದುಕೊಳ್ಳಬೇಕು.

Also Read  ಮಕ್ಕಳು ನಿಮ್ಮ ಮಾತು ಕೇಳುತ್ತಿಲ್ಲವೇ. ಈ ಸರಳ ಪರಿಹಾರ ಆಚರಿಸಿ.

ಭಾರತದಲ್ಲಿ ಶವಗಳು ಅಳುತ್ತಿದೆ ಊರಿಂದೂರಿಗೆ ಸಂಸ್ಕಾರಕ್ಕಾಗಿ ಅಲೆದಾಡುತ್ತಿದೆ, ಸಂಸ್ಕಾರಕ್ಕಾಗಿ ಅಂಗಲಾಚುತ್ತಿದೆ.ತಮಿಳುನಾಡಿನಲ್ಲಿ ಶವ ಸಂಸ್ಕಾರ ಮಾಡಲು‌ ಬಂದ ವೈದ್ಯರು, ಸ್ವಯಂ ಸೇವಕರ ಮೇಲೆ ಭೀಕರ ಹಲ್ಲೆ ಮಾಡಿದ್ದಾರೆ.ಶವವನ್ನು ಸಂಸ್ಕಾರ ಮಾಡಲು ಹೆದರುವುದಾದರೆ ವೈದ್ಯರು, ನರ್ಸ್ ಗಳು ಚಿಕಿತ್ಸೆ ನೀಡಲು ಹೆದರಿ ಮುಂದೆ ಬಾರದಿದ್ದರೆ ಭಾರತದ ಸ್ಥಿತಿ ಹೇಳತೀರದು.

ಜನರು ತಮ್ಮೊಳಗಿರುವ ಭೀತಿಯನ್ನು ಸರಿಸಿ ಶವ ಸಂಸ್ಕಾರ ಮಾಡಬೇಕು. ಇದು ನಮ್ಮ ಕಟ್ಟ ಕಡೆಯ ನಿರ್ಧಾರವಾಗಿರಬೇಕು ಹಾಗೇ ನಮ್ಮೆಲ್ಲರ ಸಂಕಲ್ಪ ವಾಗಿರಬೇಕು.

ಇಸ್ಮಾಯಿಲ್ ಮಾಲೆಂಗ್ರಿ nsm

 

error: Content is protected !!
Scroll to Top