(ನ್ಯೂಸ್ ಕಡಬ) newskadaba.com.ಸೌತಾಂಪ್ಟನ್,ಜು.8: ಕೊರೊನಾ ಇಡೀ ಜಗತ್ತನ್ನೆ ಭಯ ಬಿಳಿಸಿದರೆ ಇತ್ತ ಕ್ರಿಕೆಟ್ ಕೊರೊನಾಗೆ ಸೆಡ್ಡು ಹೊಡೆಯಲು ಹೊರಟಿದೆ. ಬರೋಬ್ಬರಿ 4 ತಿಂಗಳಿಂದ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ನುಂಗಿ, ಜಗತ್ತಿನ ತುಂಬ ಹರಡಿರುವ ಕೊರೊನಾ ಪೀಡೆಗೆ ಇನ್ನು ಅಂಜುತ್ತ ಕುಳಿತರೆ ಸಾಧ್ಯವಾಗದು ಎಂಬ ದಿಟ್ಟ ನಿರ್ಧಾರಕ್ಕೆ ಬಂದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳು ಬುಧವಾರದಿಂದ ಇಲ್ಲಿ ಟೆಸ್ಟ್ ಕದನಕ್ಕೆ ಇಳಿಯಲಿವೆ.
ಇದು ಹಿಂದಿನ ಮಾಮೂಲು ಕ್ರಿಕೆಟ್ ಟೆಸ್ಟ್ ಪಂದ್ಯಗಳಂಥಲ್ಲ. ಸಂಪೂರ್ಣ ಬದಲಾವಣೆಯೊಂದಿಗೆ ಕೊರೊನಾ ಭೀತಿ ಇರುವ ಕಾರಣ ಸಾಕಷ್ಟು ಮುಂಜಾಗ್ರತಾ ಕ್ರಮ, ನೂತನ ನಿಯಮ, ಪ್ರೇಕ್ಷಕರಿಲ್ಲದ ಶೂನ್ಯ ವಾತಾವರಣಕ್ಕೆಲ್ಲ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಹಿಂದೆ ಇದ್ದಂತೆ ವಿಕೆಟ್ ಉರುಳಿದಾಗ ಕ್ರಿಕೆಟಿಗರೆಲ್ಲ ಒಂದೆಡೆ ಗುಂಪುಗೂಡಿ ಸಂಭ್ರಮಾಚರಣೆ ನಡೆಸುವಂತಿಲ್ಲ. ಓಡಿ ಬಂದು ತಬ್ಬಿಕೊಳ್ಳುವುದು, ಬೌಲರ್‌ಗಳ ಹಾಗೂ ಕ್ಯಾಚ್ ಪಡೆದವರ ಮೈಮೇಲೆ ಏರಿ ಹೋಗುವುದು, ಬೌಲರ್‌ಗಳ ಕೈ ತಟ್ಟಿ ಸಂಭ್ರಮಿಸುವುದು ಇಲ್ಲಿ ಕಂಡುಬರದು. ಮೊಣಕೈ ಸ್ಪರ್ಶಕ್ಕೆ ಯಾವುದೇ ಅಡ್ಡಿ ಇಲ್ಲ. ಬೇಕಿದ್ದರೆ ಕಾಲಿಗೆ ಕಾಲನ್ನು ತಾಗಿಸಲೂಬಹುದುಪಂದ್ಯದ ವೇಳೆ ಸ್ಟೇಡಿಯಂ ಸಂಪೂರ್ಣ ಖಾಲಿ ಇರಲಿದೆ. ವೀಕ್ಷಕರಿಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಪಂದ್ಯದುದ್ದಕ್ಕೂ ಮೌನವೇ ಮುಂದುವರಿಯಲಿದೆ. ಆದರೆ ಟಿವಿ ವೀಕ್ಷಕರಿಗಾಗಿ ಪ್ರೇಕ್ಷಕರ ಭೋರ್ಗರೆತದ ಕೃತಕ ಧ್ವನಿಯನ್ನು ಅಳವಡಿಸಲಾಗುವುದು.
ಪಂದ್ಯಆರಂಭಕ್ಕೂ ಮುನ್ನ ದಿನಂಪ್ರತಿ ಆಟಗಾರರಿಗೆ ಕೋವಿಡ್ ಟೆಸ್ಟ್ ನಡೆಯುತ್ತದೆ. ಅಕಸ್ಮಾತ್ ಆಟದ ವೇಳೆ ಕ್ರಿಕೆಟಿಗನಿಗೆ ಕೊರೊನಾ ಲಕ್ಷಣ ಕಂಡುಬಂದಲ್ಲಿ ಬದಲಿ ಆಟಗಾರನನ್ನು ಆಡಿಸಬಹುದು. ಸರಣಿಯ ವೇಳೆ ಅಷ್ಟೇನೂ ಅನುಭವವಿಲ್ಲದ ಅಂಪಾಯರ್‌ಗಳು ಕಾರ್ಯ ನಿಭಾಯಿಸುವುದರಿಂದ ಐಸಿಸಿ ಪ್ರತಿಯೊಂದು ಇನ್ನಿಂಗ್ಸಿಗೂ ಹೆಚ್ಚುವರಿ ಡಿಆರ್‌ಎಸ್ ರಿವ್ಯೂಗೆ ಅವಕಾಶ ನೀಡಿದೆ. ಹೀಗಾಗಿ ಬ್ಯಾಟಿಂಗ್, ಬೌಲಿಂಗ್ ಕಡೆಗಳಿಂದ ಎರಡರ ಬದಲು 3 ಡಿಆರ್‌ಎಸ್ ರಿವ್ಯೂ ಮಾಡಬಹುದಾಗಿದೆ.