ಕಾನೂನು ಉಲ್ಲಂಘಿಸಿ ಜ್ಯೋತಿ ವೃತ್ತದಲ್ಲಿ ಸಮಾವೇಶ ► ಯಡಿಯೂರಪ್ಪ ಸೇರಿ 50 ಮಂದಿಯ ವಿರುದ್ಧ ಕೇಸು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಬಿಜೆಪಿ ಯುವಮೋರ್ಚಾ ವತಿಯಿಂದ ನಡೆದ‌ ಮಂಗಳೂರು ಚಲೋ ಕಾರ್ಯಕ್ರಮವನ್ನು ನಗರದ ನೆಹರೂ ಮೈದಾನದಲ್ಲಿ ಮಾಡುವ ಬದಲು ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದ ಬಳಿ ಸಮಾವೇಶ ಮಾಡಿ ಕಾನೂನನ್ನು ಉಲ್ಲಂಘಿಸಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ 50 ಮಂದಿಯ ವಿರುದ್ಧ ಬಂದರ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಬಿಜೆಪಿ ಯುವಮೋರ್ಚಾ ಸಮಾವೇಶಕ್ಕೆ ಪೊಲೀಸರು ನೆಹರು ಮೈದಾನದಲ್ಲಿ ಮಾತ್ರ ಅನುಮತಿ ನೀಡಿದ್ದು, ಆದರೆ ಬಿಜೆಪಿಯ ನಾಯಕರು, ಕಾರ್ಯಕರ್ತರು ಈ ಆದೇಶವನ್ನು ಉಲ್ಲಂಘಿಸಿ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿ ಪೊಲೀಸ್ ಇಲಾಖೆಗೆ ಸವಾಲಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಇದೀಗ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಬಂದರು ಇನ್‌ಸ್ಪೆಕ್ಟರ್ ಶಾಂತರಾಮ್ ಅವರ ದೂರಿನ ಮೇರೆಗೆ ಬಿಜೆಪಿ ಮುಖಂಡರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ಈಶ್ವರಪ್ಪ, ಪ್ರಹ್ಲಾದ್ ಜೋಷಿ, ಆರ್. ಅಶೋಕ್, ನಳಿನ್ ಕುಮಾರ್ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಪ್ರತಿಭಟನಾ ಸ್ಥಳದಲ್ಲಿದ್ದ ವೇದಿಕೆ, 2 ಲಾರಿ, ಸೌಂಡ್ ಬಾಕ್ಸ್, ಬ್ಯಾನರ್‌ಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

Also Read  ಮಂಗಳೂರು: ಮಾರ್ಕ್ ರೊಡ್ರಿಗಸ್ ನಿಧನ

ಈ ಎಲ್ಲ ನಾಯಕರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 106, 108, ಸಾರ್ವಜನಿಕ ತೊಂದರೆ ನೀಡಿದ ಕಾರಣಕ್ಕೆ ಐಪಿಸಿ, 286, 301, ಅಕ್ರಮ ಕೂಟ ಸೇರಿದಕ್ಕೆ 143, 149 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!
Scroll to Top