➤➤ ವಿಶೇಷ ಲೇಖನ ಮೂಕ ಪ್ರಾಣಿಗೆ ನೊಂದ ಹೃದಯಗಳು ಇಂದು ಕುರುಡಾಯಿತೇ…⁉️ ✍? ಇಸ್ಮಾಯಿಲ್ ಮಾಲೆಂಗ್ರಿ Nsm

(ನ್ಯೂಸ್ ಕಡಬ)newskadaba.com ಕರ್ನಾಟಕದ ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಪೋಲಿಸರ ದೌರ್ಜನ್ಯದಿಂದಾಗಿ ಹತ್ಯೆಯಾದ ಎರಡು ಬಡ ಜೀವಗಳ ಬಗ್ಗೆ ಯಾರು ತುಟಿಕ್ ಪಿಟಿಕ್ ಅನ್ನೋದಿಲ್ಲ.

ಕೊರೋನಾ ರೋಗದ ಕಾರಣ ತಮಿಳುನಾಡಿನಲ್ಲಿ ಲಾಕ್ ಡೌನ್ ಮಾಡಲಾಗಿತ್ತು. ಕಾನೂನು ಪ್ರಕಾರ ರಾತ್ರಿ 8 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕಾಗಿತ್ತು. ಆದರೆ ಜಯರಾಜ್ ಎಂಬವರು ತನ್ನ ಸಣ್ಣ ಪುಟ್ಟ ಕೆಲಸದ ಕಾರಣ ಅಂಗಡಿ ಮುಚ್ಚಲು ಹತ್ತು ನಿಮಿಷ ತಡವಾಗಿದ್ದರಿಂದ ಎಂದಿಗೂ ನಡೆಯಬಾರದ ಘಟನೆ ನಡೆದೇ ಹೋಯಿತು.

ಅಂಗಡಿ ಬಂದ್ ಮಾಡದ ಕಾರಣ ಜಯರಾಜ್ ರನ್ನು ಪೋಲಿಸರು ಬಂಧಿಸಿ ಹೀನಾಯವಾಗಿ ಹಿಂಸೆ ನೀಡುತ್ತಾರೆ, ಅದನ್ನು ಕಂಡ‌ ಮಗ ಬೆನಿಕ್ಸ್ ಪೋಲಿಸರನ್ನು ಪ್ರಶ್ನಿಸಿದ ಇದರಿಂದ ಕೋಪಗೊಂಡ ಪೋಲಿಸರು ಇಬ್ಬರನ್ನೂ ಹತ್ಯೆಗೆಯ್ಯುತ್ತಾರೆ. ಹಲ್ಲೆಯ ಕ್ರೂರತೆ ಎಷ್ಟಿತ್ತೆಂದರೆ ಮೊಣಕಾಲಿನಲ್ಲಿ ಹಿಮ್ಮುಖವಾಗಿ ನಿಲ್ಲಿಸಿ, ನಗ್ನರನ್ನಾಗಿಸಿ, ರಕ್ತ ಚಿಮ್ಮುವ ರೀತಿಯಲ್ಲಿ ಹಲ್ಲೆ ನಡೆಸಿ ಮೊಣಕಾಲಿನ ಚಿಪ್ಪನ್ನು ಒಡೆದು ಹಾಕಿದರು. ಇಷ್ಟಕ್ಕೆ ಹಿಂಸೆ ನಿಲ್ಲಲಿಲ್ಲ ಗುದದ್ವಾರದೊಳಗೆ ಲಾಠಿಯನ್ನು ತುರುಕಿಸಿ ಬಹಳ ಅವಮಾನವೀಯವಾಗಿ ಹಿಂಸಾತ್ಮಕ ಪಾಪಿ‌ ಪೋಲಿಸರು ರಕ್ತ ಹರಿಯುತ್ತಿದ್ದರೂ ಒಂದು ಚೂರೂ ಕರುಣೆ ತೋರದೆ ಇಬ್ಬರನ್ನೂ ಸಾವಿನ ಕೂಪಕ್ಕೆ ತಳ್ಳುತ್ತಾರೆ.

Also Read  ಕೆಲಸದ ಸಮಸ್ಯೆಗಳಿಗೆ ಹೀಗೆ ಮಾಡಿ.

ಕೆಲ ದಿನಗಳ ಹಿಂದೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ, ಆಹಾರ ಅರಸಿ ಬಂದ ಗರ್ಭಿಣಿ ಆನೆಯನ್ನು ಯಾರೋ ಪಾಪಿಗಳು ಅನನಾಸಿನಲ್ಲಿ ಸ್ಪೋಟಕ ಮದ್ದುಗಳನ್ನು ತುಂಬಿಸಿ ಏನೂ ತಿಳಿಯದ ಮೂಕ ಪ್ರಾಣಿಯನ್ನು ಕೊಂದಾಗ ಅಂದು ಅದೆಷ್ಟೋ ಜನರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಧ್ವನಿಯೆತ್ತಿದರು. ಆದರೆ ಇಂದು ತಮಿಳುನಾಡಿನ ತೂತುಕುಡಿಯಲ್ಲಿ ತಂದೆ ಮತ್ತು ಮಗನನ್ನು ಅಮಾನವೀಯವಾಗಿ ಹತ್ಯೆ ಮಾಡಿದಾಗ ಅನೆಗೆ ಮಿಡಿದ ಹೃದಯಗಳು ಕುರುಡಾದವು.

ನಮ್ಮ ಭಾರತದಲ್ಲಿ ಪೋಲಿಸ್ ದೌರ್ಜನ್ಯದಿಂದ ಸಾವನ್ನಪ್ಪಿದ ಹಲವಾರು ಘಟನೆಗಳು ಬೆಳಕಿಗೆ ಬಾರದೆ ಮುಚ್ಚಿಕೊಂಡಿದೆ. ಜಯರಾಜ್ ಮತ್ತು ಬೆನಿಕ್ಸ್ ಹತ್ಯೆ ಜೂನ್ 22 ರಂದು ನಡೆದದ್ದು, ಬೆಳಕಿಗೆ ಬರಲು ದಿನಗಳು ಬೇಕಾಯಿತು. ಇದೇ ರೀತಿ ಕರ್ನಾಟಕದಲ್ಲಿ 19 ವರ್ಷ ಪ್ರಾಯದ ಬಾಲಕ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿಯ ಹೊರಗಡೆ ಪೋಲಿಸರ ಲಾಠಿಯೇಟಿನ ದೌರ್ಜನ್ಯದಿಂದ ಹೃದಯಾಘಾತಕ್ಕೊಳಗಾಗಿ ಮರಣ ಹೊಂದುತ್ತಾನೆ. ಕ್ಷುಲ್ಲಕ ಕಾರಣಕ್ಕಾಗಿ ಪೋಲಿಸರು ಸಾಮಾನ್ಯ ಜನರನ್ನು ಅಮಾನವೀಯವಾಗಿ, ಕ್ರೂರವಾಗಿ ಹತ್ಯೆ ಮಾಡುವ ಪ್ರಸಂಗಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ಇಂತಹ ದೌರ್ಜನ್ಯ, ಹಲ್ಲೆ, ಲಾಠಿಚಾರ್ಜ್ ನಮ್ಮ ಕಣ್ಣು ಮುಂದೆ ದಿನನಿತ್ಯ ನಡೆಯುತ್ತಿದ್ದರೂ ನಾವು ಮೌನವಾಗಿದ್ದೇವೆ, ವಿರೋಧಿಸಲು ಹಿಂಜರಿಯತ್ತೇವೆ ಇದೇ ರೀತಿ ಮೌನದಿಂದಿದ್ದರೆ ಇಂತಹ ಕೃತ್ಯಗಳು ಹೆಚ್ಚಾಗಬಹುದೇ ಹೊರತು ನಿರ್ಮೂಲನೆ ಸಾಧ್ಯವಿಲ್ಲ. ಭಾರತದಲ್ಲಿ ಹಿಂಸಾಚಾರ, ಅತ್ಯಚಾರಗಳು ತಾಂಡವಾಡುತ್ತಿದೆ. ಆರೋಪಿಗಳು ನಮಗೆ ಯಾವುದೇ ಸಂಬಂಧ ಇಲ್ಲ ಎಂಬ ರೀತಿಯಲ್ಲಿ ಸಮಾಜದಲ್ಲಿ ಹಾಯಾಗಿ ನಡೆಯುತ್ತಿದ್ದಾರೆ. ನಿರಪರಾಧಿಗಳು ಹಿಂಸಾಚಾರದಿಂದ ತಮ್ಮ ಬದುಕನ್ನು ಕೊನೆಗೊಳಿಸುತ್ತಾರೆ.

Also Read  ಮಾಡುವ ಕೆಲಸದಲ್ಲಿ ಉನ್ನತಿ ಮತ್ತು ದುಷ್ಟರಿಂದ ರಕ್ಷಣೆಗೆ ಹೀಗೆ ಮಾಡಿ.

ಅಮೇರಿಕದಲ್ಲಿ ಜಾರ್ಜ್ ಗಾಗಿ ಅಮೇರಿಕನ್ನರು ಯಾವ ರೀತಿ ಮಿಡಿದರೋ, ಅವರ ಹೋರಾಟದ ತೀವ್ರತೆ ಹೇಗಿತ್ತು ಅದೇ ರೀತಿಯಲ್ಲಿ ಇಲ್ಲಿ ನಡೆಯುವ ಪೋಲಿಸ್ ದೌರ್ಜನ್ಯದ ವಿರುದ್ಧ ನಡೆಯಬೇಕಿದೆ. ಇಂತಹ ಘಟನೆ ನಡೆಯದಿರಲು ನಾವೆಲ್ಲರೂ ಧ್ವನಿಯಾಗಬೇಕು. ಇದು ಜಯರಾಜ್ ಮತ್ತು ಬೆನಿಕ್ಸ್ ಮಾತ್ರವಾಗಿರದೆ ಈ ಮೊದಲು ಪ್ರಾಣ ತ್ಯಜಿಸಿದ ಅಮಾಯಕರಿಗೂ ನ್ಯಾಯದ ಕರೆಯಾಗಬೇಕು.

?️ಇಸ್ಮಾಯಿಲ್ ಮಾಲೆಂಗ್ರಿnsm

error: Content is protected !!
Scroll to Top