(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.29, ದುಬೈನಿಂದ ಖಾಸಗಿ ವಿಮಾನದಲ್ಲಿ ಮಂಗಳೂರಿಗೆ ಹೊರಟಿದ್ದ 150 ಮಂದಿ ಪ್ರಯಾಣಿಕರಿಗೆ ಕರ್ನಾಟಕ ಸರಕಾರ ಪ್ರವೇಶ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅವರು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಅವರಿಗೆ ಕಾಸರಗೋಡು ಜಿಲ್ಲಾಡಳಿತ ಕಾಸರಗೋಡಿನ ಸುತ್ತಮುತ್ತಲಿನ ಲಾಡ್ಜ್ ಗಳಲ್ಲಿ ಕ್ವಾರಂಟೈನ್ ಮಾಡಿದ್ದು, ಈ ವೇಳೆ 20 ಮಂದಿ ದುಬೈ ಯಾನಿಗಳು ಕ್ವಾರಂಟೈನ್ ಆಗದೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲಾಡಳಿತಕ್ಕೆ ಇದು ಹೊಸ ತಲೆನೋವು ತಂದಿಟ್ಟಿದ್ದು, ಪರಾರಿಯಾದವರು ಕೊಡಗು ಮತ್ತು ಮಂಗಳೂರಿಗೆ ಪ್ರಯಾಣ ಬೆಳೆಸಿರುವ ಮಾಹಿತಿ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿದೆ.
ವಿಶೇಷ ಬಾಡಿಗೆ ವಿಮಾನ ಕರ್ನಾಟಕಕ್ಕೆ ಬರಲು ಅನುಮತಿ ಸಿಗದ ಕಾರಣ ಕೇರಳ ಕಣ್ಣೂರಿಗೆ ಬಂದಿಳಿದಿತ್ತು. ಈ ವೇಳೆ ಅತಂತ್ರರಾದ ಗರ್ಭಿಣಿಯರು, ಮಕ್ಕಳು, ವೃದ್ಧರು ಸೇರಿದಂತೆ ಪ್ರಯಾಣಿಕರಿಗೆ ಮಂಗಳೂರು ಶಾಸಕ ಯು.ಟಿ ಖಾದರ್ ನೆರವು ನೀಡಿದ್ದು, ಸ್ಥಳಕ್ಕೆ ಧಾವಿಸಿ ಬಸ್ ಗಳಲ್ಲಿ ಮಂಗಳೂರಿಗೆ ಕರೆತಂದು ಇಲ್ಲಿನ ಲಾಡ್ಜ್ ಗಳಲ್ಲಿ ಕ್ವಾರಂಟೈನ್ ಮಾಡಿದ್ದಾರೆ. ಕೇರಳದಿಂದ ಸೇವಾ ಸಿಂದು ಆಪ್ ಗೆ ನೋಂದಣಿ ಮಾಡಿ ಕರ್ನಾಟಕಕ್ಕೆ ಬಂದಿದ್ದು, ಈ ವೇಳೆ 150 ಜನರ ಪೈಕಿ 20 ಮಂದಿ ಪರಾರಿಯಾಗಿದ್ದಾರೆ. ಕಾಸರಗೋಡಿನಲ್ಲಿ ಕ್ವಾರಂಟೈನ್ ಮಾಡಿದ್ದ ವೇಳೆ ಅಲ್ಲಿ ಭದ್ರತೆಯಿಲ್ಲ ಎಂದು ಹೊರಗಡೆ ಹೋದವರು ಮಂಗಳೂರು ಮತ್ತು ಕೊಡಗಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಖಾಸಗಿ ವಿಮಾನಕ್ಕೆ ವ್ಯವಸ್ಥೆ ಮಾಡಿದ ಕಂಪೆನಿ ವಿರುದ್ಧ ಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾನೂನು ಕ್ರಮಕ್ಕೆ ಮುಂದಾಗಿದೆ.