ರಿಕ್ಷಾ ಪಲ್ಟಿ: ನಾಲ್ವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಾಯ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಜೂ.29, ಎಸ್ಸೆಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಸಾಗಿಸುತ್ತಿದ್ದ ರಿಕ್ಷಾವೊಂದು ಪಲ್ಟಿಯಾದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಪಾಣೆಮಂಗಳೂರು ಸಮೀಪದ ಶಂಭೂರಿನಲ್ಲಿ ಸೋಮವಾರ ನಡೆದಿದೆ.

ಗಾಯಗೊಂಡವರನ್ನು ಶಂಭೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳೆಂದು ಗುರುತಿಸಲಾಗಿದೆ. ಇದರ ಪೈಕಿ ಅಕ್ಷಿತ್ ಗೆ ತೀವ್ರ ತರದ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಗಾಯಗೊಂಡಿರುವ ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ವಿದ್ಯಾರ್ಥಿನಿಯರಿಗೆ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಶಂಭೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಣೆ ಮಂಗಳೂರು ಶಾರದಾ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಶಂಭೂರು ಬಳಿಯ ಚರ್ಚ್ ಸಮೀಪ ನಾಯಿಯೊಂದು ರಿಕ್ಷಾಕ್ಕೆ ಅಡ್ಡಬಂದ ಪರಿಣಾಮ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಮಗುಚಿಬಿದ್ದಿದೆ ಎನ್ನಲಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದೆ.

Also Read  ಸುಳ್ಯ: ಮೊಮ್ಮಕ್ಕಳಿಗೆ ಮಾವಿನಕಾಯಿ ಕೊಯ್ದುಕೊಟ್ಟ ಹಿನ್ನೆಲೆ ➤ ಅತ್ತೆಯ ಮೇಲೆಯೇ ಮೆಣಸಿನಹುಡಿ ಮಿಶ್ರಿತ ಬಿಸಿನೀರು ಎರಚಿದ ಪಾಪಿ ಸೊಸೆ..

error: Content is protected !!
Scroll to Top