(ನ್ಯೂಸ್ ಕಡಬ)newskadaba.com ಕುಂದಾಪುರ, ಜೂ.27, ಗಂಗೊಳ್ಳಿ ಹಾಗೂ ಬೈಂದೂರು ವಲಯದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಕಡಲಿಗಿಳಿಯಲು ಸಜ್ಜಾಗಿದ್ದು, ಜೂ. 28ರಿಂದ ಅವಿಭಜಿತ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಮೀನುಗಾರಿಕೆ ಆರಂಭವಾಗಲಿದೆ.
ಗಂಗೊಳ್ಳಿ ಹಾಗೂ ಬೈಂದೂರು ವಲಯದ ನಾಡದೋಣಿ ಮೀನುಗಾರರ ಸಂಘದಿಂದ ಮರವಂತೆಯ ವರಾಹ ದೇವಸ್ಥಾನದ ಬಳಿಯ ಸಮುದ್ರ ತೀರದಲ್ಲಿ ಜೂ.28ಕ್ಕೆ ಸಮುದ್ರ ಪೂಜೆ ನಡೆಯಲಿದ್ದು, ಇದರೊಂದಿಗೆ ಕುಂದಾಪುರ ತಾಲೂಕಿನಲ್ಲಿ ಈ ಋತುವಿನ ನಾಡದೋಣಿ ಮೀನುಗಾರಿಕೆ ಚಾಲನೆ ಪಡೆಯಲಿದೆ. ಸಮೃದ್ಧಿಗೆ ಪ್ರಾರ್ಥನೆ ಉಭಯ ವಲಯಗಳ ಮೀನುಗಾರ ಮುಖಂಡರು, ಮೀನುಗಾರರ ಉಪಸ್ಥಿತಿಯಲ್ಲಿ ಮರವಂತೆಯ ಕಡಲ ತಡಿಯಲ್ಲಿ ಸಮುದ್ರ ದೇವತೆಯ ಲಿಂಗ ರಚಿಸಿ ಪೂಜೆ ಸಲ್ಲಿಸಿದ ಬಳಿಕ ಸುರಕ್ಷಿತ ಹಾಗೂ ಸಮೃದ್ಧ ಮೀನುಗಾರಿಕೆಗೆ ಪ್ರಾರ್ಥಿಸಿ, ಸಮುದ್ರಕ್ಕೆ ಬಾಗಿನ ಅರ್ಪಿಸಲಾಗುತ್ತದೆ. ಆ ಬಳಿಕ ಈ ಋತುವಿನ ನಾಡದೋಣಿ ಮೀನುಗಾರಿಕೆ ಅಧಿಕೃತವಾಗಿ ಆರಂಭವಾಗುತ್ತದೆ.