ವೆನ್ ಲಾಕ್ ನಲ್ಲಿ ಶೀಘ್ರವೇ ಒಳರೋಗಿ ಸೇವೆ ➤ ಸಚಿವ ಕೋಟ

(ನ್ಯೂಸ್ ಕಡಬ)newskadaba.com ಮಂಗಳೂರು, ಜೂ. 26, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಶೀಘ್ರವೇ ಒಳರೋಗಿ ಸೇವೆ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ನಿರ್ವಹಣೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೆನ್‍ಲಾಕ್ ಆಸ್ಪತ್ರೆಯನ್ನು ಕೋವಿಡ್‍ಗೆ ನಿಗದಿತ ಆಸ್ಪತ್ರೆಯಾಗಿ ಪರಿಗಣಿಸಿದ್ದರಿಂದ ಇತರೆ ಸೇವೆಗಳನ್ನು ನಿಲ್ಲಿಸಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ವೆನ್‍ಲಾಕ್‍ನಲ್ಲಿ ಹೊರರೋಗಿ ಸೇವೆ ಆರಂಭಿಸಲಾಗಿದೆ. ಪ್ರತೀದಿನ 250ರಷ್ಟು ಮಂದಿ ಹೊರರೋಗಿಗಳು ಬರುತ್ತಿದ್ದಾರೆ. ಶೀಘ್ರವೇ ಕನಿಷ್ಠ 100 ಒಳರೋಗಿಗಳ ಸೇವೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ 142 ಕೋರೋನಾ ಸಕ್ರಿಯ ಪ್ರಕರಣಗಳಿವೆ. 370 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 10 ಮಂದಿ ತೀರಿ ಹೋಗಿದ್ದಾರೆ. ಕೋವಿಡ್ ಪರೀಕ್ಷೆಗೆ ಜಿಲ್ಲೆಯಲ್ಲಿ 4 ಖಾಸಗಿ ಹಾಗೂ 1 ಸರಕಾರಿ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾತನಾಡಿ, ಕೋವಿಡ್ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೂ ನೇರವಾಗಿ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆಯ ನಿಗದಿತ ವೆಚ್ಚವನ್ನು ರೋಗಿಗಳೇ ಭರಿಸಬೇಕಾಗುತ್ತದೆ. ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯುವವರು ಆರೋಗ್ಯ ಇಲಾಖೆಯ ಶಿಫಾರಸ್ಸಿನೊಂದಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಾರಿ ಮಾತನಾಡಿ, ಜಿಲ್ಲೆಯ ಖಾಸಗಿ ಮೆಡಿಕಲ್ ಕಾಲೇಜುಗಳು ಈಗಾಗಲೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದೆ ಬಂದಿವೆ. ಜಿಲ್ಲೆಯಲ್ಲಿ ಈ ಮೆಡಿಕಲ್ ಕಾಲೇಜುಗಳಲ್ಲಿ ಸುಮಾರು 800 ಹಾಸಿಗೆಗಳು ಕೋವಿಡ್ ಚಿಕಿತ್ಸೆಗೆ ಲಭ್ಯವಾಗಲಿವೆ. ಇದಲ್ಲದೇ, ಕೆಲವು ಖಾಸಗಿ ಆಸ್ಪತ್ರೆಗಳು ಕೂಡಾ ಕೋವಿಡ್ ಚಿಕಿತ್ಸೆ ನೀಡುತ್ತಿವೆ ಎಂದು ಹೇಳಿದರು.

Also Read  ಉತ್ತರಕನ್ನಡದಲ್ಲಿ ಮತ್ತೆ ಭೂಕುಸಿತ, 3 ಕಿ.ಮೀ ದೂರ ಕೇಳಿಸಿದ ಭಾರಿ ಸದ್ದು

ಜಿಲ್ಲೆಯ ಒಟ್ಟಾರೆ ಕೋವಿಡ್ ಪ್ರಕರಣಗಳಲ್ಲಿ 295 ಅಂತಾರಾಷ್ಟ್ರೀಯ ಹಾಗೂ 130 ಅಂತಾರಾಜ್ಯ ಪ್ರಯಾಣಕ್ಕೆ ಸಂಬಂಧಿಸಿವೆ ಎಂದು ಹೇಳಿದರು. ವೆನ್‍ಲಾಕ್ ಅಧೀಕ್ಷಕ ಡಾ. ಸದಾಶಿವ ಮಾತನಾಡಿ, ಹಾಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಪ್ರಕರಣಗಳಲ್ಲಿ 5 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದರು. ಸಭೆಯಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಅಪರ ಜಿಲ್ಲಾಧಿಕಾರಿ ರೂಪಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ಮತ್ತಿತರರು ಇದ್ದರು.

Also Read  ಸೂಟ್‌ಕೇಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಶವ ಪತ್ತೆ ಪ್ರಕರಣ - ಓರ್ವನ ಬಂಧನ

error: Content is protected !!
Scroll to Top