➤➤ ಕವರ್ ಸ್ಟೋರಿ ದೂರವಾಯಿತು ಕೊಣಾಜೆ ದೂರವಾಣಿ ಸಂಪರ್ಕ..!! ➤ ಕೇಳುವವರು ಯಾರು ಸಾರ್ವಜನಿಕರ ಗೋಳು..? ✍? ಕಿರಣ್ ಕಡಬ

(ನ್ಯೂಸ್ ಕಡಬ)newskadaba.com ಕಡಬ. ಜೂ.20, ತಾಲೂಕಿನ ಕೊಣಾಜೆ ಗ್ರಾಮ ವ್ಯಾಪ್ತಿಯ ಪಟ್ಲ, ಬ್ರಂತೋಡು, ಮಾಲ, ಬೆತ್ತೋಡಿ ಹಾಗೂ ಸುಳ್ಯ ಪ್ರದೇಶಗಳಲ್ಲಿ ಕಳೆದ ಒಂದು ವಾರಗಳಿಂದ ಬಿ.ಎಸ್.ಎನ್.ಎಲ್ ನೆಟ್‍ವರ್ಕ್ ಸಮಸ್ಯೆ ತಲೆದೋರಿದ್ದು, ಇದರಿಂದ ಸ್ಥಿರ ದೂರವಾಣಿ ಸಂಪರ್ಕವಿಲ್ಲದೆ ಸಾರ್ವಜನಿಕರಿಗೆ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಸಮಸ್ಯೆ ಸರಿಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅನೇಕ ವರ್ಷಗಳಿಂದ ಇಲ್ಲಿ ನೆಟ್‍ವರ್ಕ್ ಸಮಸ್ಯೆ ಎದುರಾಗುತ್ತಿದ್ದು, ಈ ಗ್ರಾಮಪಂಚಾಯತ್‍ಗೆ ಬರುವ ಸಾರ್ವಜನಿಕರು ಇಲ್ಲಿ ತಮ್ಮ ಕೆಲಸ ಕಾರ್ಯಗಳಾಗದೇ ಕಛೇರಿಗಳಿಗೆ ಅಲೆಯುತ್ತಿರುವುದು ಸಾಮಾನ್ಯವಾಗಿದೆ. ಈ ಗ್ರಾಮ ಪಂಚಾಯತ್ ನ ವ್ಯಾಪ್ತಿಯಲ್ಲಿ ಬ್ಯಾಂಕ್, ಅಂಚೆ ಕಛೇರಿ, ಹಾಲು ಮಾರಾಟಗಾರರ ಸೊಸೈಟಿ ಹಾಗೂ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ವಿದ್ಯುತ್ ಕಡಿತಗೊಂಡರೆ ಅಥವಾ ಗುಡುಗು ಬಂದರೆ ನೆಟ್‍ವರ್ಕ್ ಕಡಿತಗೊಳ್ಳುತ್ತದೆ. ಒಂದೊಂದು ಸಲ ಕರೆಂಟ್ ಇದ್ದರೂ ನೆಟ್‍ವರ್ಕ್ ಮಾತ್ರ ಇಲ್ಲದೆ ದಿನ ಕಳೆಯುವಂತಾಗಿದೆ.
ಸರ್ಕಾರಿ ಕಛೇರಿ ಹಾಗೂ ಬ್ಯಾಂಕ್‍ಗಳಲ್ಲಿ ಬಿ.ಎಸ್.ಎನ್ ಎಲ್ ನೆಟ್‍ವರ್ಕ್ ಸಂಪರ್ಕವಿದ್ದು, ಈ ನೆಟ್‍ವರ್ಕ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳು ಸಕಾಲಕ್ಕೆ ದೊರೆಯುತ್ತಿಲ್ಲ. ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸಗಳಿಗಾಗಿ ಕಛೇರಿಗಳಿಗೆ ಪದೇ ಪದೇ ಅಲೆಯುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ.
ಇನ್ನೂ ಖಾಸಗಿ ಉದ್ಯೋಗಿಗಳು ಮತ್ತು ಶಾಲಾ ಮಕ್ಕಳ ಗೋಳು ಹೇಳತೀರದಂತಾಗಿದೆ. ಕೊರೋನಾದಿಂದಾಗಿ ಬೆಂಗಳೂರು, ಮುಂಬೈ, ಮಹಾರಾಷ್ಟ್ರ, ಹಾಗೂ ಇತರ ಪಟ್ಟಣಗಳಿಂದ ಮನೆಗೆ ಬಂದು ಕೆಲಸವನ್ನು ವರ್ಕ್ ಫ್ರಮ್ ಹೋಮ್ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗದೆ ಹಲವು ಯುವಕರು ಕೆಲಸವನ್ನು ಕಳೆದುಕೊಂಡಿರುವ ಪರಿಸ್ಥಿತಿಯು ಇದೆ. ಇನ್ನೂ ಶಾಲಾ ಕಾಲೇಜು ಮಕ್ಕಳು ತಮ್ಮ ಶಾಲಾ ಕಾಲೇಜುಗಳಲ್ಲಿ ಆನ್‍ಲೈನ್ ಕ್ಲಾಸ್ ನಡೆಸುತ್ತಿರುವುದರಿಂದ ನೆಟ್‍ವರ್ಕ್‍ಗಾಗಿ ಗುಡ್ಡಗಾಡುಗಳಲ್ಲಿ ಅಲೆದಾಡಿದರೂ ಸಿಗುತ್ತಿಲ್ಲ. ಇದರಿಂದ ಸಂಬಂಧಿಕರ ಮನೆಗೆ ತೆರಳಿ ವಾಸಿಸುವಂತಹ ಪರಿಸ್ಥಿತಿ ಬಂದೊದಗಿದೆ. ಹಲವು ವರ್ಷಗಳ ಬೇಡಿಕೆ ನಂತರ ಸರಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ಟವರ್ ಸ್ಥಾಪನೆಗೊಂಡಿತ್ತಾದರೂ ಅದು ಹೆಸರಿಗಷ್ಟೇ ಇದೆ ಎನ್ನುವಂತಾಗಿದೆ. ಕಳೆದ ಎರಡು ವಾರಗಳ ಹಿಂದೆ 2ಜೀ ಯಿಂದ 3ಜೀ ಮೆಲ್ದರ್ಜೆಗೆ ಏರಿಸಲಾದರೂ ಅದು ಉಪಯೋಗಕ್ಕೆ ಬಂದಿದ್ದು ಬರೀ ಒಂದು ವಾರವಷ್ಟೆ… ಮತ್ತೆ ಸ್ಥಿರ ದೂರವಾಣಿ ಇಲ್ಲದೇ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಪ್ರದೇಶಗಳಲ್ಲಿ ಬಿ.ಎಸ್.ಎನ್.ಎಲ್ ಟವರ್ ಬಿಟ್ಟರೆ ಬೇರೆ ಯಾವುದೇ ಟವರ್‍ಗಳಿಲ್ಲ. ಕೆಳ ತಿಂಗಳ ಹಿಂದೆ ಜಿಯೋ ಟವರ್‍ನ ಕೆಲಸ ಪ್ರಾರಂಭವಾಗಿದ್ದರೂ ಕೂಡ ಇನ್ನೂ ಪೂರ್ಣಗೊಂಡಿಲ್ಲ, ಬೇರೆ ಯಾವುದೇ ಟವರ್ ಸ್ಥಾಪನೆಗೆ ಇಲ್ಲಿ ಇನ್ನೂ ಸಮಯ ಕೂಡಿ ಬಂದಿಲ್ಲಾ ಎಂಬಂತಿದೆ. ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾವಿರಾರು ಗ್ರಾಹಕರನ್ನು ಹೊಂದಿರುವ ಬಿ.ಎಸ್.ಎನ್.ಎಲ್ ದೂರವಾಣಿ ಕೇಂದ್ರ ಪದೇ ಪದೇ ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವುದರಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.

Also Read  ಮಂಗಳೂರು: ಗೆಳೆಯರ ಜೊತೆ ವಿಹಾರಕ್ಕೆಂದು ಬಂದ ಬೆಂಗಳೂರಿನ ಯುವಕ ಸಮುದ್ರಪಾಲು


ಮೊಬೈಲ್ ಇದ್ದರೂ ರೇಂಜ್ ಇಲ್ಲದೇ ಬಾರೀ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರು ಬಿ.ಎಸ್.ಎನ್.ಎಲ್‍ ನ್ನು ಅವಲಂಭಿಸಿರುವುದರಿಂದ ತಕ್ಷಣ ದುರಸ್ತಿ ಪಡಿಸಿ ಸ್ಪಂದಿಸಬೇಕಾಗಿದೆ. ಇನ್ನೂ ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಸಂಬಂಧಪಟ್ಟ ಅಧಿಕಾರಿಗಳು ಅಸಡ್ಡೆ ತೋರಿದರೆ ದೂರವಾಣಿ ಗ್ರಾಹಕರು ಒಟ್ಟು ಸೇರಿ ಪ್ರತಿಭಟಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

Also Read  ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನ- ಉಡುಪಿ ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ..!

ವರದಿ: ಕಿರಣ್ ಕಡಬ

error: Content is protected !!
Scroll to Top