(ನ್ಯೂಸ್ ಕಡಬ) newskadaba.com.ಮಂಗಳೂರು,ಜೂ.19: ನಾಲ್ವರು ನಿರ್ಗತಿಕ ಹಿರಿಯ ನಾಗರಿಕರನ್ನು ಆಸ್ಪತ್ರೆಯೊಂದರ ಸಿಬ್ಬಂದಿ ಮಾರುಕಟ್ಟೆ ಬಳಿ ತಂದು ಬಿಟ್ಟು ಹೋಗಿರುವ ಅಮಾನವೀಯ ಘಟನೆ ಮಂಗಳೂರು ನಗರದಲ್ಲಿ ಬೆಳಕಿಗೆ ಬಂದಿದೆ.
ನಾಲ್ವರು ಹಿರಿಯ ನಾಗರಿಕರು ಮೂರು ತಿಂಗಳಿನಿಂದ ನಗರದ ಹೊರವಲಯದ ಖಾಸಗಿ ಆಸ್ಪತ್ರೆಯಲ್ಲಿದ್ದರು. ಅದಕ್ಕಿಂತ ಮೊದಲು ಇವರ ಸಹಿತ ಹಲವಾರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿದ್ದರು. ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಮಾರ್ಪಡಿಸುವ ಸಂದರ್ಭ ಅವರನ್ನು ನಗರದ ಹೊರವಲಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ನಾಲ್ವರು ನಿರ್ಗತಿಕರನ್ನು ಆಸ್ಪತ್ರೆಯ ವಾಹನದಲ್ಲಿ ಕಂಕನಾಡಿ ಮಾರುಕಟ್ಟೆಗೆ ತಂದು ಬಿಟ್ಟು ಹೋಗಲಾಗಿದೆ. ಇದನ್ನು ಪ್ರಶ್ನಿಸಿದ ಸ್ಥಳೀಯರಲ್ಲಿ ಆಸ್ಪತ್ರೆ ಸಿಬ್ಬಂದಿಗಳು ನಾವು ಅವರನ್ನು ಸುಮಾರು ಮೂರು ತಿಂಗಳಿನಿಂದ ನೋಡಿಕೊಳ್ಳುತ್ತಿದ್ದೆವು ಈಗ ಅವರಿಂದ ಬೇರೆ ರೋಗಿಗಳಿಗೆ ಸಮಸ್ಯೆ ಆಗುತ್ತಿರುವುದರಿಂದ ಇಲ್ಲಿ ತಂದು ಬಿಟ್ಟಿದ್ದೇವೆ ಎಂದು ಬೇಜಾವಬ್ದಾರಿ ಹೇಳಿಕೆ ನೀಡಿದ್ದಾರೆ.
ಸ್ಥಳೀಯರು ಈ ಅನಾಥ ಜೀವಗಳಿಗೆ ಊಟ ಹಾಗೂ ಇತರ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಜಿಲ್ಲಾಡಳಿತ. ಜನಪ್ರತಿನಿಧಿಗಳು ಈ ಅನಾಥ ನಿರ್ಗತಿಕ ಹಿರಿಯ ನಾಗರಿಕರಿಗೆ ವ್ಯವಸ್ಥೆ ಮಾಡಿಕೊಡುವಂತೆಯೂ ಸ್ಥಳಿಯರು ಒತ್ತಾಯಿಸಿದ್ದಾರೆ.