(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.17, ಸುಬ್ರಹ್ಮಣ್ಯದಿಂದ ಐನೆಕಿದು ಮತ್ತು ಹರಿಹರ ಪಲ್ಲತಡ್ಕ ಪ್ರದೇಶವನ್ನು ಸಂಪರ್ಕಿಸುವ ಜಿ.ಪಂ. ರಸ್ತೆ ದುಸ್ತರಗೊಂಡು ಕೆಸರುಮಯಗೊಂಡಿದ್ದು, ವಾಹನ ಸಂಚಾರ ಅಸಾಧ್ಯ ರೀತಿಯಲ್ಲಿದೆ. ರಸ್ತೆಯ ದುರಸ್ತಿ ಕಾರ್ಯ ಅರ್ಧದಲ್ಲೇ ಬಾಕಿಯಾಗಿದ್ದು, ಕಡಬ ತಾಲೂಕಿನ ಸುಬ್ರಹ್ಮಣ್ಯದಿಂದ ಐನೆಕಿದು, ಹರಿಹರ ಪಲ್ಲತಡ್ಕ ಪ್ರದೇಶವನ್ನು ಸಂಪರ್ಕಿಸುವ ರಸ್ತೆ ಮಳೆಯಿಂದಾಗಿ ತೀರಾ ಹದಗೆಟ್ಟಿದೆ. ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ರಸ್ತೆ ಅಲ್ಲಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸಿದ್ದು, ಬಹುತೇಕ ರಸ್ತೆ ದುಸ್ತರವಾಗಿಯೇ ಉಳಿದಿದೆ.
ಈ ರಸ್ತೆಯ ಮಲೆಯಾಳ ಎಂಬಲ್ಲಿ ಕಾಂಕ್ರೀಟ್ ಕಾಮಗಾರಿಗಾಗಿ 2-3 ತಿಂಗಳ ಹಿಂದೆ ಮಣ್ಣು ಅಗೆಯಲಾಗಿದ್ದು, ಇದೀಗ ಕೆಸರುಮಯಗೊಂಡಿದ್ದರಿಂದ ಹಲವು ವಾಹನಗಳು ಮುಂದಕ್ಕೆ ಸಂಚರಿಸಲಾಗದೇ ಹಿಂದುರುಗಿದ ಘಟನೆ ನಡೆದಿದೆ. ಪೊಲೀಸ್ ವಾಹನವೊಂದು ಕಾರ್ಯ ನಿಮಿತ್ತ ಐನೆಕಿದು ಕಡೆಗೆ ಸಂಚಾರಕ್ಕೆ ಪ್ರಯತ್ನಿಸಿದ್ದು, ರಸ್ತೆ ದುರಾವಸ್ಥೆಯಿಂದ ವಾಹನ ಮುಂದಕ್ಕೆ ಹೋಗಲು ಅಸಾಧ್ಯವಾಗಿ ಅಧಿಕಾರಿಗಳು ಹಿಂತಿರುಗಿದ್ದಾರೆ.
ಅಲ್ಲದೇ ಈ ರಸ್ತೆಯಲ್ಲಿ ಪ್ರಯಾಣಿಸಿದ ಹಲವರು ರಸ್ತೆ ದುಸ್ಥಿತಿಯಿಂದ ಜಾರಿ ಬಿದ್ದು, ಗಾಯಗಳನ್ನು ಮಾಡಿಕೊಂಡಿದ್ದು, ಅಪಾಯನ್ನು ಅಹ್ವಾನಿಸುವ ರೀತಿಯಲ್ಲಿ ಸದ್ಯ ಈ ರಸ್ತೆ ಇದೆ.
ರಸ್ತೆ ಪರಿಸ್ಥಿತಿ ತೀರಾ ಹದಗೆಟ್ಟಿದ್ದರೂ ದುರಸ್ತಿಗೆ ಮುಂದಾಗದೆ ನಿರ್ಲಕ್ಷತನ ತೋರುತ್ತಿದ್ದಾರೆ ಎಂದು ಆರೋಪಿಸಿ ಸಂಬಂಧಪಟ್ಟವರ ಬಗ್ಗೆ ಸ್ಥಳೀಯರು, ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತುರ್ತು ಸಂದರ್ಭದಲ್ಲಿ ಈ ಭಾಗದ ಜನತೆ ಏನು ಮಾಡಬೇಕೆಂದು ಪ್ರಶ್ನಿಸುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಈ ರಸ್ತೆಯನ್ನು ತುರ್ತು ಸರಿಪಡಿಸುವಂತೆ ಆಗ್ರಹಿಸಿದ್ದಾರೆ.