ನೀತಿ ತಂಡದಿಂದ ಚೀನಾ ವಸ್ತುಗಳ ವಿರುದ್ಧ ಜನಜಾಗೃತಿ ಜಾಥಾ

(ನ್ಯೂಸ್ ಕಡಬ) newskadaba.com ಕಡಬ, ಸೆ.03, ಇಚಿಲಂಪಾಡಿಯ ನೀತಿ ತಂಡದ ವತಿಯಿಂದ ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚೀನಾ ವಸ್ತುಗಳ ಮಾರಾಟ ಹಾಗೂ ಬಳಕೆಯನ್ನು ವಿರೋಧಿಸಿ ಕಡಬ ಪೇಟೆಯಾದ್ಯಂತ ಮೆರವಣಿಗೆ ನಡೆಸಿ ಕರಪತ್ರ ಹಂಚುವ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಸಭೆಯನ್ನುದ್ದೇಶಿಸಿ ನೀತಿ ತಂಡದ ರಾಜ್ಯಾಧ್ಯಕ್ಷರಾದ ಜಯನ್ ಟಿ. ಮಾತನಾಡಿ, ಕಳಪೆ ಗುಣಮಟ್ಟದ ಕಡಿಮೆ ಬಾಳಿಕೆಯ ಚೀನಾ ಉತ್ಪಾದಿತ ವಸ್ತುಗಳನ್ನು ನಾವು ಖರೀದಿಸಬಾರದು. ಚೀನಾದ ಉತ್ಪನ್ನಗಳನ್ನು ನಮ್ಮ ದೇಶದಲ್ಲಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡದೆ ಬಹಿಷ್ಕರಿಸಿ ಚೀನಾ ವಸ್ತುಗಳ ಆಮದಿನ ಮೇಲೆ ಸರಕಾರವು ಮಾಡಿರುವ ಒಪ್ಪಂದಗಳನ್ನು ರದ್ದುಗೊಳಿಸಬೇಕು. ಇದಕ್ಕಾಗಿ ನಾವು ಗ್ರಾಮ ಮಟ್ಟದಿಂದ ಆಂದೋಲನವನ್ನು ಆರಂಭಿಸಬೇಕೆಂದು ಕರೆನೀಡಿದರು.

ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಹರಿಶಂಕರ್ ಮಾತನಾಡಿ, ನಾವು ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಭಾರತೀಯ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಚೀನಾದ ವಸ್ತುಗಳಿಗೆ ಭಾರತದಲ್ಲಿ ಮಾರುಕಟ್ಟೆ ಸಿಕ್ಕಿದಾಗ ಭಾರತದ ಕೈಗಾರಿಕೆಗಳು ಅವನತಿಯತ್ತ ಸಾಗುತ್ತದೆಯಲ್ಲದೆ ನಿರುದ್ಯೋಗ ಸಮಸ್ಯೆ ಉಂಟಾಗುತ್ತದೆ. ಚೀನಾ ದೇಶವು ಭಾರತ ದೇಶದ ಮಾರುಕಟ್ಟೆಯ ಲಾಭ ಪಡೆದು ತನ್ನ ಕುತಂತ್ರ ಬುದ್ಧಿಯ ಮೂಲಕ ಭಾರತವನ್ನು ಹೊಸಕಿ ಹಾಕಲು ಪ್ರಯತ್ನಿಸುತ್ತಿದೆ ಎಂದರು.

Also Read  ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ಸ್ಮಾರ್ಟ್ ಫೋನ್ ವಿತರಣೆ

ಈ ಸಂದರ್ಭದಲ್ಲಿ ನೀತಿ ತಂಡದ ರಾಜ್ಯ ಕಾರ್ಯದರ್ಶಿ ಜೈಸನ್ ಜಾರ್ಜ್, ನೆಲ್ಯಾಡಿ ವಲಯಾಧ್ಯಕ್ಷ ಅಬ್ರಹಾಂ ಪಿ.ಜೆ, ಕಡಬ ವಲಯಾಧ್ಯಕ್ಷ ಪ್ರಕಾಶ್ ಕೋಡಿಂಬಾಳ, ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ ತಸ್ಲೀಂ ಮರ್ಧಾಳ, ಕದಂಬ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಸೀತಾರಾಮ ಗೌಡ, ದಲಿತ ಸಮಿತಿಯ ವಸಂತ ಕುಬುಲಾಡಿ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಇ.ಸಿ. ಚೆರಿಯನ್, ಉಪನ್ಯಾಸಕರಾದ ವಾಸುದೇವ ಗೌಡ, ಫೆಲೀನ್ ಹಾಗೂ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!
Scroll to Top