ಅಡಕೆ ಹಿಂಗಾರಕ್ಕೆ ರೋಗ ಭಾಧೆ ; ಕಂಗಾಲಾದ ರೈತ

ವರದಿ: ಕೆ.ಎಸ್.ಬಾಲಕೃಷ್ಣ ಕೊಯಿಲ
ಕಳೆದ ವರ್ಷ ಪ್ರಾಕೃತಿಕ ವಿಕೋಪದಲ್ಲಿ ಅಡಕೆ ಇಳುವರಿಯ ಏರಿಳಿತ ಕಂಡು ಕಂಗಾಲಾಗಿದ್ದ ರೈತನಿಗೆ ಈ ಬಾರಿ ಅಡಕೆ ಹಿಂಗಾರಕ್ಕೆ ನಿಗೂಢ ರೋಗಭಾಧೆ ಆವರಿಸಿ ಮತ್ತೊಂಡು ಹೊಡೆತ ಬಿದ್ದಿದೆ.


ಕಡಬ ತಾಲೂಕಿನ ಪೆರಾಬೆ ಗ್ರಾಮದ ಇಡಾಳ ಶ್ರೀಧರ ಗೌಡ ಎಂಬವರ ಅಡಕೆ ತೋಟ ಸಂಪೂರ್ಣ ಈ ರೋಗಕ್ಕೆ ಆಹುತಿಯಾಗಿದ್ದು, ಅಡಕೆ ಫಸಲು ಈ ಭಾರಿ ಮರೀಚಿಕೆಯಾಗಿದೆ. ಫಲವತ್ತಾದ ಅಡಕೆ ತೋಟದಲ್ಲಿ ಪ್ರತೀ ಹಂಗಾಮಿನಲ್ಲಿ ಬರೊಬ್ಬರಿ ಅಡಕೆ ಫಸಲು ಕಾಣುತ್ತಿದ್ದ ತೋಟದಲ್ಲಿ , ಅಡಕೆ ಫಸಲು ಬದಲು ಕೇವಲ ಒಣಗಿದ ಹಿಂಗಾರವೆ ಕಾಣುತ್ತಿದೆ. ಇದರಿಂದಾಗಿ ರೈತ ಶ್ರೀಧರ ಗೌಡ ಕಂಗಾಲಾಗಿದ್ದು ಚಿಂತಾಕ್ರಾಂತರಾಗಿದ್ದಾರೆ. ಶ್ರೀಧರ ಗೌಡರಿಗೆ ಆಜುಬಾಜು ಆರುನೂರು ಅಡಕೆ ಮರಗಳುಲ್ಲ ಸೊಗಸಾದ ಅಡಕೆ ತೋಟವಿದೆ, ಸುಮಾರು ಹದಿನೇಳು ವರ್ಷ ಹರೆಯದ ಅಡಕೆ ಮರಗಳಿವು. ಸ್ವತಃ ಶಕ್ತಿಮೀರಿ ಶ್ರಮವ್ಯಯ ಮಾಡಿ ತೋಟವನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದಾರೆ ಈ ರೈತ. ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಕೇವಲ ಸಾವಯವ ಗೊಬ್ಬರದಿಂದಲೇ ಅಡಕೆ ಮರಗಳನ್ನು ಸಮೃದ್ಧವಾಗಿ ಬೆಳೆಸಿರುವ ಇವರು ಈ ತೋಟದಲ್ಲಿ ಏನಿಲ್ಲವೆಂದರೂ ವರ್ಷಕ್ಕೆ ಹನ್ನೆರಡು ಕ್ವಿಂಟಾಲ್ ಅಡಕೆ ಪಡೆಯುತ್ತಾರೆ. ಒಂದು ರೀತಿಯಲ್ಲಿ ಪ್ರತೀ ವರ್ಷ ಇವರಿಗೆ ಬಂಪರ್ ಬೆಳೆ ಸಿಗುತ್ತಿತ್ತು. ಈ ವರ್ಷದ ಬೆಳೆಗೆ ನಿಗೂಢ ರೋಗ ಭಾಧೆ ಆವರಿಸಿ ಲೆಕ್ಕಾಚಾರ ಬುಡಮೇಲಾಗಿದೆ. ಈ ವರ್ಷ ಕೇವಲ ಇಪ್ಪತೈದು ಕೆ.ಜಿ ಅಡಕೆ ಸಿಕ್ಕರೆ ಪುಣ್ಯ ಎನ್ನುವ ಮಟ್ಟಿಗೆ ತೋಟ ಬಂದು ನಿಂತಿದೆ. ಈ ವರ್ಷದ ಬೇಸಿಗೆಯಲ್ಲಿ ಅಡಕೆ ಹಿಂಗಾರ ಒಣಗುವ ರೋಗ ಕಾಣಿಸಿಕೊಂಡು ಇಡೀ ತೋಟವನ್ನು ಆವರಸಿಕೊಂಡಿದೆ. ಹಿಂಗಾರ ಅರಳುವಾಗ ಚೆನ್ನಾಗಿಯೇ ಇದ್ದರೂ ಬರಬರುತ್ತಾ ಅದು ಕರಟಿದಂತಾಗಿ ಸತ್ತೇ ಹೋಗುತ್ತದೆ. ಕಳೆದ ಎರಡು ತಿಂಗಳಿಂದ ನಿರಂತರವಾಗಿ ಈ ರೋಗ ಕಾಡುತ್ತಿದೆ. ಮಳೆಗಾಲ ಪ್ರಾರಂಭವಾದರೂ ಹಿಂಗಾರ ಒಣಗುವುದು ಮಾತ್ರ ನಿಲ್ಲುವುದಿಲ್ಲ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಹೊರತುಪಡಿಸಿ ಉಳಿದ ಸಮಯದಲ್ಲಿ ಅಡಕೆ ಹಿಂಗಾರ ಬಿಡುತ್ತಿರುತ್ತದೆ. ಶ್ರೀಧರ ಗೌಡರ ತೋಟದಲ್ಲಿ ಬಿಟ್ಟು ಬಿಡದೆ ರೋಗ ಆವರಿಸಿ ಈ ಒಂದು ವರ್ಷದ ಅಡಕೆ ಫಸಲನ್ನೇ ಕಳೆದುಕೊಂಡಂತಾಗಿದೆ. ಈ ಬಗ್ಗೆ ತೋಟಗಾರಿಕಾ ಇಲಾಖೆಯವರಿಗೆ ಮಾಹಿತಿ ನೀಡಿದರೆ, ನೀವು ತೋಟದಲ್ಲಿ ಎಡೆಗಿಡ ನೆಡುವುವುದು ಒಳಿತು ಎನ್ನುವ ಸಲಹೆ ನೀಡುತ್ತಾರೆ ಎಂದು ಶ್ರೀಧರ ಗೌಡ ಹೇಳುತ್ತಾರೆ, ಒಂದು ಅಡಕೆ ಮರದ ಆಯುಸ್ಸು ಸಾಮಾನ್ಯವಾಗಿ 30 ವರ್ಷ ಇರುತ್ತದೆ(ಪೃಕೃತಿ ವಿಕೋಪದ ಹೊರತಾಗಿ) ಸಾಮಾನ್ಯವಾಗಿ ಗಿಡಗಳಿಗೆ 20 ರಿಂದ 22 ವರ್ಷವಾಗುವ ಹೊತ್ತಿಗೆ ಎಡೆ ಗಿಡ ನೆಬಹುದು ಶ್ರೀಧರ ಗೌಡರ ಮರಗಳಿಗೆ ಕೇವಲ 17 ವರ್ಷ ಇನ್ನೂ ಫಸಲು ಪಡೆಯಬೇಕಾಗಿದೆ.
ಶ್ರೀಧರ ಗೌಡ ಅವರ ತೋಟ ಹೀಗೆ ಮಕಾಡೆ ಮಲಗಿದರೆ, ಇನ್ನುಳಿದಂತೆ ಪರಿಸರದ ಹತ್ತಾರು ತೋಟಗಳಲ್ಲಿ ಕೂಡಾ ಈ ರೋಗ ಕಾಣಿಸಿಕೊಂಡಿದೆ. ಆದರೆ ಅಷ್ಟೊಂದು ಪ್ರಮಾಣದಲ್ಲಿ ಇಲ್ಲ ಎನ್ನುವುದು ಸಮಾಧಾನದ ಸಂಗತಿಯಾಗಿದೆ. ಈ ಬಾರಿ ಬಹುತೇಕ ರೈತರ ತೋಟದಲ್ಲಿ ಹಿಂಗಾರ ಒಣಗುವ ರೋಗ ಕಾಣಿಸಿಕೊಂಡು ಕಾಟ ನೀಡಿದೆ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕೆಂದು ಇಲ್ಲಿನ ರೈತ ಗಂಗಾಧರ ಗೌಡ ಕುಂಡಡ್ಕ ಅಗ್ರಹಿಸಿದ್ದಾರೆ.
ಕಳೆದ ಬೇಸಿಗೆಯಲ್ಲಿ ಅಡಕೆ ಹಿಂಗಾರ ಒಣಗುವ ರೋಗ ಪ್ರಾರಂಭವಾಗಿ ಮಳೆಗಾಲ ಪ್ರಾರಂಭವಾದರೂ ಅದು ನಿಲ್ಲುವ ಸೂಚನೆ ಇಲ್ಲ. ಈ ವರ್ಷ ಅಡಕೆ ಫಸಲು ಸಿಗುವ ಯಾವುದೇ ನಿರೀಕ್ಷೆ ಇಲ್ಲ. ಯಾಕೆಂದರೆ ಹಿಂಗಾರ ಒಣಗಿ ಕಾಯಿ ಬಿಡಲೇ ಇಲ್ಲ. ಇನ್ನು ಫಸಲು ಎಲ್ಲಿಂದ ಬರಬಹುದು, ಸಾವಯವ ಕೃಷಿ ಮಾಡಿದರೂ ರೋಗಭಾಧೆ ಕಂಡು ಬಂದಿದೆ. ನನಗೆ ಸೂಕ್ತ ಪರಿಹಾರ ನೀಡಿ ನನ್ನನ್ನು ಕಷ್ಟದಿಂದ ಪಾರು ಮಾಡಬೇಕು.
ಶ್ರೀಧರ ಗೌಡ ಇಡಾಳ, ನೊಂದ ರೈತ

Also Read  ಪುದು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಸ್‌ಡಿಪಿಐ - ಬಿಜೆಪಿ ಒಳ ಒಪ್ಪಂದ ► ಕಾಂಗ್ರೆಸ್ ಮುಖಂಡ ಪ್ರಕಾಶ್ ಕಾಜವ ಆರೋಪ

ಇದು ಶಿಲೀಂದ್ರದಿಂದ ಬರುವ ರೋಗ ಸಮಾನ್ಯವಾಗಿ ಜನವರಿಯಿಂದ ಜೂನ್ ತನಕ ಇರುತ್ತದೆ. ಅಡಕೆ ಮರದಲ್ಲಿ ಉಳಿದಿರುವ ಒಣ ಹಿಂಗಾರದಿಂದಲೂ ರೋಗ ಹರಡುತ್ತದೆ. ಅಡಕೆ ಕೀಳುವಾಗ ನಾವು ಅಡಕೆ ಮರದಲ್ಲಿರುವ ಒಣ ಹಿಂಗಾರವನ್ನೂ ಕಿತ್ತು ಸ್ವಚ್ಚ ಮಾಡಬೇಕು. ಡೈಟಿನಿಯಂ 45 ನ್ನು ಪ್ರತೀ ಲೀಟರ್ ಗೆ ಮೂರು ಗ್ರಾಮ್ ಸೇರಿಸಿ ಜನವರಿ-ಫೆಬ್ರವರಿ ಹಂಗಾಮಿನಲ್ಲಿ ಸಿಂಪಡನೆ ಮಾಡಬೇಕು, ಕಡಿಮೆಯಾಗದಿದ್ದರೆ 45 ದಿನಗಳ ಬಳಿಕ ಮತ್ತೆ ಸಿಂಪಡನೆ ಮಾಡಬೇಕು, ಇದರಿಂದ ನಿರ್ಮೂಲನೆಯಾಗುತ್ತದೆ. ಅಥವಾ ಟರ್ಬನ್ ಡೈಸೋಯಿಮ್ ಕೆಮಿಕಲ್ ನ್ನು 2 ಲೀಟರ್ ನೀರಿಗೆ ಮೂರು ಗ್ರಾಮ ಬೆರೆಸಿ ಸಿಂಪಡಿಸಿದರೆ ಉತ್ತಮ. ಬ್ರೋಡೋ ದ್ರಾವಣ ಸಿಂಪಡನೆಯಿಂದ ಯಾವುದೇ ಪ್ರಯೋಜನವಿಲ್ಲ, ಅದು ಕೊಳೆ ರೋಗಕ್ಕೆ ಮಾತ್ರ.
ಡಾ|ನಾಗರಾಜ್ ಪಾಡಿಯೊಪ್ಪಾರ್
ಮುಖ್ಯಸ್ಥರು, ಅಡಕೆ ಸಂಶೋಧನ ಕೇಂದ್ರ ಶಿವಮೊಗ್ಗ

Also Read  ಕುಂತೂರು: 'ನಕ್ಷತ್ರ' ಸ್ವಸಹಾಯ ಸಂಘ ಉದ್ಘಾಟನೆ

error: Content is protected !!
Scroll to Top