(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ. 14, ರಾಜ್ಯದಾದ್ಯಂತ ಕಳೆದೆರಡು ದಿನಗಳಿಂದಲೂ ಭಾರೀ ಮಳೆ ಸುರಿಯುತ್ತಿದ್ದು, ಮುಂದಿನ ಮೂರರಿಂದ ನಾಲ್ಕು ದಿನಗಳ ಕಾಲ ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ 20 ಸೆಂ..ಮೀ. ಮಳೆಯಾಗಿದ್ದು, ರಾಜ್ಯದಲ್ಲಿ ಅಂಕೋಲದಲ್ಲಿಯೇ ಅತೀ ಹೆಚ್ಚು ಮಳೆಯಾಗಿದೆ. ಉಡುಪಿ ಜಿಲ್ಲೆಯ ಕೋಟ 9, ಕುಂದಾಪುರ ಹೊನ್ನಾವರ, ಕದ್ರಾದಲ್ಲಿ 8, ಗೋಕರ್ಣ, ಸಿದ್ದಾಪುರ (ಕುಂದಾಪುರ), ಶಿರಾಲಿಯಲ್ಲಿ ತಲಾ 6, ಕಾರವಾರ 5, ಕಾರ್ಕಳದಲ್ಲಿ 4, ಮೂಡಬಿದಿರೆ, ಮಂಗಳೂರು, ನಿಪ್ಪಾಣಿ, ಹೊಸನಗರದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ.
ಜೂನ್ 18ರ ವರೆಗೂ ಕರಾವಳಿ ಭಾಗಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ. ಜೂನ್ 14 ಮತ್ತು 15ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 115 ಮಿ.ಮೀ. ನಿಂದ 204 ಮಿ.ಮೀ.ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.