(ನ್ಯೂಸ್ ಕಡಬ)newskadaba.com ಸುಬ್ರಹ್ಮಣ್ಯ. ಜೂ.13, ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಜೀವನೋಪಾಯಕ್ಕಾಗಿ ಹಲವಾರು ಮಂದಿ ಕೃಷಿ ಹಾಗೂ ವ್ಯಾಪಾರವನ್ನೇ ನಂಬಿದ್ದು, ಲಾಕ್‌ಡೌನ್ ಪರಿಣಾಮ ವ್ಯಾಪಾರ ನೆಲಕಚ್ಚಿ ಕೂಲಿಗೂ ಕಷ್ಟವಾಗಿತ್ತು. ಈ ಸಮಯದಲ್ಲಿ ಒಕ್ಕೂಟ ಸದಸ್ಯರ ಗುಂಪಿಗೆ ಕೆಲಸ ನೀಡಿ ಸುಬ್ರಹ್ಮಣ್ಯ ಗ್ರಾ.ಪಂ. ಮಾಡಿ ಮಾದರಿಯೆನಿಸಿದೆ.
ಸುಬ್ರಹ್ಮಣ್ಯದಲ್ಲಿ ಸಂಜೀವಿನಿ ಒಕ್ಕೂಟ ಸದಸ್ಯರು ವ್ಯಾಪಾರ ಕೆಲಸ ಮಾಡುತ್ತಿದ್ದು, ಕೋವಿಡ್-19 ಪರಿಣಾಮ ಲಾಕ್‌ಡೌನ್‌ನಿಂದಾಗಿ ಇವರ ಜೀವನೋಪಾಯಕ್ಕೆ ಅಡ್ಡಿಯಾಗಿತ್ತು. ಇದಕ್ಕಾಗಿ ಗ್ರಾ.ಪಂ. ಈ ಗುಂಪಿನ ಸದಸ್ಯರಿಗೆ ಉದ್ಯೋಗ ಖಾತರಿಯಲ್ಲಿ ನೋಂದಣಿ ಮಾಡಿ, ಯೋಜನೆಯ ದಿನಗೂಲಿ ಕೆಲಸ ಕೊಡಿಸಿ ಆದಾಯ ದಾರಿ ಕಲ್ಪಿಸಿದೆ.
ಸಂಜೀವಿನಿ ಸಿಬ್ಬಂದಿಗಳ ಪ್ರಗತಿ ಪರಿಶೀಲನೆ ನಡೆಸಿದ ಸುಳ್ಯ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಪಂಚಾಯತ್ ಸಿಬಂದಿ ಸಭೆ ನಡೆಸಿ ಉದ್ಯೋಗ ಚೀಟಿ ಮಾಡಲು ಆಂದೋಲನ ನಡೆಸಿದರು. ಈ ಸಂದರ್ಭ ಪಂಚಾಯತ್ ಸಿಬಂದಿ ಹೊಸದಾಗಿ ಸುಮಾರು 30 ಉದ್ಯೋಗ ಚೀಟಿಯನ್ನು ಒಕ್ಕೂಟದ ಸದಸ್ಯರಿಗೆ ಮಾಡಿಸಿದ್ದಾರೆ.
ಜೂ. 5ರಂದು 22 ಜನ ಸಂಜೀವಿನಿ ಮಹಿಳೆಯರು ಸುಬ್ರಹ್ಮಣ್ಯದ ದೇವರ ಗದ್ದೆಯಲ್ಲಿ, ತೋಡಿನಲ್ಲಿ ಬೆಳೆದಿರುವ ಕಾಡು ಕಡಿದು, ಕೆಸರು ತೆಗೆದು ಸ್ವಚ್ಛಗೊಳಿಸಿದ್ದಾರೆ. ಕೆಲಸದ ಆರಂಭದಲ್ಲಿ ಎಲ್ಲ ಮಹಿಳೆಯರ ದೇಹದ ಉಷ್ಣತೆ ಪರೀಕ್ಷಿಸಿ, ಸರಕಾರದ ಕೋವಿಡ್- 19 ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿನವರೆಗೂ ಸ್ವಂತ ಕೆಲಸವನ್ನೇ ಉದ್ಯೋಗ ಖಾತರಿಯಲ್ಲಿ ಮಾಡಲಾಗುತ್ತಿದ್ದು, ಸಾರ್ವಜನಿಕ ಕೆಲಸವೊಂದನ್ನು ಇದೇ ಮೊದಲು ಹಲವರು ಒಟ್ಟಾಗಿ ಸೇರಿ ಮಾಡಿ ಮಾದರಿಯಾಗಿದ್ದಾರೆ. ಪ್ರತಿ ಯೋರ್ವರಿಗೂ ಕನಿಷ್ಠ 14 ದಿನಗಳ ಕೆಲಸ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಒಂದು ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸಕೊಡಲು ಇದರಲ್ಲಿ ಅವಕಾಶ ಇದೆ. ಇವರಿಗೆ ದಿನವೊಂದಕ್ಕೆ ರೂ. 275 ಕೂಲಿ ನೀಡಲಾಗುತ್ತಿದೆ.