(ನ್ಯೂಸ್ ಕಡಬ)newskadaba.com ಮಂಗಳೂರು, ಜೂ.12, ಧಾರಾಕಾರ ಮಳೆಯಿಂದಾಗಿ ತನ್ನದೇ ಮನೆಯ ಕಂಪೌಂಡ್ ಗೋಡೆ ಕುಸಿದು ಗಂಭೀರ ಗಾಯಗೊಂಡ ಗುರುಪುರದ ಮಠದಗುಡ್ಡೆ ನಿವಾಸಿ ನಾರಾಯಣ ನಾಯ್ಕ (52) ಎಂಬವರು ಮೃತಪಟ್ಟಿದ್ದಾರೆ.
ಶುಕ್ರವಾರ ಧಾರಾಕಾರ ಮಳೆಯಾಗುತ್ತಿದ್ದುದರಿಂದ ಮಧ್ಯಾಹ್ನ 1:30ರ ವೇಳೆಗೆ ನೀರು ಹೋಗಲು ಮನೆಯ ಪಕ್ಕದಲ್ಲಿ ಚಿಕ್ಕ ತೋಡು ಬಿಡಿಸುವ ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಮಳೆಯಿಂದ ತೇವಗೊಂಡಿದ್ದ ಅವರದೇ ಮನೆಯ ಮುರಕಲ್ಲಿನ ಆಳೆತ್ತರದ ಕಂಪೌಂಡ್ ನಾರಾಯಣ ನಾಯ್ಕರ ಮೇಲೆ ಬಿದ್ದಿದೆ. ತೀವ್ರ ರಕ್ತಸ್ರಾವಗೊಂಡ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಮೃತರು ಕಲಾವಿದ ವಿ.ಜೆ. ಮಧುರಾಜ್ ಸೇರಿದಂತೆ ಇಬ್ಬರು ಮಕ್ಕಳು ಹಾಗೂ ಪತ್ನಿಯೊಂದಿಗೆ ವಾಸವಾಗಿದ್ದರು.
ದ.ಕ. ಜಿಲ್ಲೆಯಲ್ಲಿ ಜೂ.14ರವರೆಗೆ ನಾಲ್ಕು ದಿನಗಳ ಕಾಲ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಶುಕ್ರವಾರ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಮಳೆಯ ವಾತಾವರಣವಿದ್ದು, ಹಗಲಿಡೀ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿತ್ತು. ಸಂಜೆ ಬಳಿಕ ಗಾಳಿ- ಸಿಡಿಲಿನೊಂದಿಗೆ ಕೂಡಿದ ಮಳೆಯಾಗಿದೆ. ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆ ಸುರಿಯುವ ನಿರೀಕ್ಷೆಯಿದೆ.
ಗುರುವಾರ ಬೆಳಗ್ಗಿನಿಂದ ಶುಕ್ರವಾರ ಬೆಳಗ್ಗಿನವರೆಗೆ ದ.ಕ. ಜಿಲ್ಲೆಯಲ್ಲಿ ಸರಾಸರಿ 26.1 ಮಿ.ಮೀ. ಮಳೆಯಾಗಿದೆ. ಬಂಟ್ವಾಳದಲ್ಲಿ 26.3 ಮಿ.ಮೀ., ಬೆಳ್ತಂಗಡಿಯಲ್ಲಿ 17.9 ಮಿ.ಮೀ., ಮಂಗಳೂರಿನಲ್ಲಿ 30.3 ಮಿ.ಮೀ., ಪುತ್ತೂರಿನಲ್ಲಿ 31.3 ಮಿ.ಮೀ., ಸುಳ್ಯದಲ್ಲಿ 24.6 ಮಿ.ಮೀ. ಮಳೆ ದಾಖಲಾಗಿದೆ.