(ನ್ಯೂಸ್ ಕಡಬ)newskadaba.com ಬೆಂಗಳೂರು. ಜೂ.12, ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಾ ಇದೆ. ಇಂದಿಗೆ ಕೊರೊನಾ ಪ್ರಕರಣಗಳು 6, 244 ಮತ್ತು ಬೆಂಗಳೂರಿನಲ್ಲಿ 584 ಕ್ಕೆ ಏರಿಕೆ ಆಗಿದೆ. ಈ ಪ್ರಮಾಣದಲ್ಲಿ ಏರಿಕೆಯಾಗಲು ಕಾರಣ ಸರ್ಕಾರವೇ ಅಂತ ಆರೋಗ್ಯ ತಜ್ಞರು ಅಸಮಾಧಾನ ಹೊರ ಹಾಕಿದ್ದಾರೆ.
ದಿನಕ್ಕೊಂದು ರೂಲ್ಸ್ ಮಾಡ್ತಾ ಇರೋದು, ಬೇಕಾಬಿಟ್ಟಿ ನಿಯಮಗಳು ಸಡಿಲಿಕೆ ಮಾಡುತ್ತಿರುವುದೇ ಕೊರೊನಾ ಪ್ರಕರಣ ಪತ್ತೆ ಜಾಸ್ತಿ ಆಗಲು ಕಾರಣ ಎಂದು ಸ್ವತಃ ಆರೋಗ್ಯ ತಜ್ಞರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಟೇಟ್ ಕೋವಿಡ್ ವಾರ್ ರೂಂ ನೀಡಿದ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಬೇಕಾಬಿಟ್ಟಿಯಾಗಿ ನಿಯಮಗಳನ್ನು ಸಡಿಲಿಕೆ ಮಾಡುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇನ್ನಷ್ಟು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಇಲಾಖೆ, ಕೋವಿಡ್-19 ನಿಯಂತ್ರಣ ವಿಚಾರದಲ್ಲಿ ದಿನಕ್ಕೊಂದು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಇದು ಕೊರೊನಾ ಹೆಚ್ವಳಕ್ಕೆ ದಾರಿ ಮಾಡಿಕೊಟ್ಟಂತಾಗಿದ್ದು, ಈ ಮೂಲಕ ಜುಲೈನಲ್ಲಿ ಕೊರೊನಾ ಮಹಾಸ್ಪೋಟ ಆಗುವ ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಬೇಕಾಬಿಟ್ಟಿ ಸಡಿಲಿಕೆ ಮಾಡಿದ ನಿಯಮಗಳೇನು?
14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಇಳಿಸಲಾಗಿದೆ. ಸೂಕ್ತ ಮೇಲ್ವಿಚಾರಣೆ ವ್ಯವಸ್ಥೆ ಇಲ್ಲದೆಯೇ ರೋಗ ಲಕ್ಷಣ ಇಲ್ಲದವರಿಗೆ ಹೋಂ ಕ್ವಾರಂಟೈನ್‍ಗೆ ಸೂಚಿಸಲಾಗಿದೆ. ವಾರ್ ರೂಂ ವಿಶ್ಲೇಷಣೆ ಕಡೆಗಣಿಸಲಾಗುತ್ತಿದೆ.
ಕರ್ನಾಟಕ ಕೋವಿಡ್ ವಾರ್ ರೂಂ, ಒಟ್ಟು ಸೋಂಕಿತರಲ್ಲಿ ಶೇ.96 ಮಂದಿ ರೋಗ ಲಕ್ಷಣವನ್ನೇ ಹೊಂದಿಲ್ಲ ಎಂದು ತಿಳಿಸಿದೆ. ಹೀಗಿರುವಾಗ ವಾರ್ ರೂಂ ವಿಶ್ಲೇಷಣೆಯನ್ನು ಕಡೆಗಣಿಸಿ ಕೇವಲ ರೋಗ ಲಕ್ಷಣ ಹೊಂದಿದವರಿಗೆ ಮಾತ್ರವೇ ಪರೀಕ್ಷೆ ನಡೆಸಲು ಅದೇಶಿಸಿದೆ.
ಸೋಂಕಿತರ ಕುರಿತು ಇನ್ನಿಲ್ಲದ ಕಾಳಜಿ ತೋರಿದ ಸರ್ಕಾರ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಾಗ ರೋಗಿಗಳನ್ನು ಪತ್ತೆ ಹಚ್ಚುವ ಪರೀಕ್ಷೆಯಲ್ಲೂ ನಿಯಮ ಸಡಿಲಿಸಿದೆ. ದ್ವಿತೀಯ ಸಂಪರ್ಕ ವ್ಯಕ್ತಿಗಳಿಗೆ ಕ್ವಾರಂಟೈನ್ ಮತ್ತು ಪರೀಕ್ಷೆ ಕೈ ಬಿಟ್ಟಿದೆ. 12 ದಿನಕ್ಕೆ ಇದ್ದ ನಿಗಾ ಅವಧಿಯನ್ನು 10 ದಿನಗಳಿಗೆ ಇಳಿಸಿದ್ದು, ರೋಗ ಲಕ್ಷಣ ಇಲ್ಲದ ಸೋಂಕಿತರನ್ನು ಏಳೇ ದಿನಕ್ಕೆ ಮನೆಗೆ ಕಳುಹಿಸಲಾಗುತ್ತಿದೆ.
ಮೊದಲಿಗೆ ಹೊರಗಿನಿಂದ ಬರುವ ಎಲ್ಲಾ ಪ್ರಯಾಣಿಕರಿಗೂ ಕೊರೊನಾ ಪರೀಕ್ಷೆ ಮಾಡಲಾಗುತ್ತಿತ್ತು. ಕ್ವಾರಂಟೈನ್ ಮುಗಿಸಿ ಮನೆಗೆ ಹೋಗುವ ಮುನ್ನವೂ ಪರೀಕ್ಷೆಗೆ ನಡೆಸಲಾಗುತ್ತಿತ್ತು. ನಂತರ ವಿಮಾನ ಹಾಗೂ ರೈಲಿನಲ್ಲಿ ಬರುವವರಿಗೆ ಸ್ವತಃ ಖಾಸಗಿಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಒಬ್ಬರಿಗೆ 650 ರೂ. ದರ ನಿಗದಿಪಡಿಸಿ, ಟೆಸ್ಟ್‍ಗೆ ಸೂಚಿಸಲಾಗಿತ್ತು. ಇದೀಗ ಕೇವಲ 7 ದಿನಗಳ ಕ್ವಾರಂಟೈನ್ ಅವಧಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡರಷ್ಟೇ ಪರೀಕ್ಷೆ ನಡೆಸಲು ಸೂಚಿಸಿದೆ.
ಸೋಂಕು ಹೆಚ್ಚಿರುವ ಕಂಟೈನ್ಮೆಂಟ್ ವಲಯಗಳಲ್ಲಿ ರ‍್ಯಾಂಡಮ್ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ರೋಗ ಲಕ್ಷಣವೇ ಇಲ್ಲದ ಬಹಳಷ್ಟು ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಇದೀಗ ರ‍್ಯಾಂಡಮ್ ಪರೀಕ್ಷೆಯನ್ನು ತ್ಕಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ರೀತಿ ಸರ್ಕಾರ ನಿಯಮಗಳಲ್ಲಿ ಸಡಿಲಿಕೆ ಮಾಡಿದ್ದು ಮತ್ತು ಕೋವಿಡ್ ವಾರ್ ರೂಂ ವರದಿ ಕಡೆಗಣನೆ ರಾಜ್ಯಕ್ಕೆ ಮಾರಕವಾಗ್ತಿವೆ ಎನ್ನಲಾಗುತ್ತಿದೆ. ಈ ಎಲ್ಲಾ ರಣಗಳಿಂದ ಜುಲೈನಲ್ಲಿ ಕೊರೊನಾ ಸ್ಫೋಟವಾಗುವ ಸಾಧ್ಯತೆ ಇದೆ ಎಂದು ತಜ್ಞರು ಸರ್ಕಾರವನ್ನು ಎಚ್ಚರಿಸಿದ್ದಾರೆ.