(ನ್ಯೂಸ್ ಕಡಬ)newskadaba.com ಪುತ್ತೂರು. ಜೂ.12, ಶಾಲಾ ಶುಲ್ಕದ ವಸೂಲಾತಿ ಸಂಬಂಧಿಸಿದಂತೆ ಯಾವುದೇ ವಿದ್ಯಾರ್ಥಿಗಳ ಪೋಷಕರಿಗೆ ಒತ್ತಡ ಹೇರುವಂತಿಲ್ಲ ಎಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸೂಚನೆ ನೀಡಿದ್ದಾರೆ.
ಕೆಲವೆಡೆ ಖಾಸಗಿ ಶಾಲೆಯಲ್ಲಿ ಶಾಲಾ ಶುಲ್ಕವನ್ನು ವಸೂಲು ಮಾಡುತ್ತಿರುವ ಕುರಿತು ದೂರುಗಳು ಬರುತ್ತಿದ್ದು, ಶಿಕ್ಷಣ ಇಲಾಖೆಯ ಮುಂದಿನ ಆದೇಶ ಬರುವವರೆಗೂ ಪೋಷಕರಿಂದ ಯಾವುದೇ ಶುಲ್ಕ ವಸೂಲು ಮಾಡುವಂತಿಲ್ಲ. ಅಲ್ಲದೇ ಶುಲ್ಕ ಪಾವತಿಸಲು ಯಾವುದೇ ರೀತಿಯ ಒತ್ತಡ ಹೇರಬಾರದು, ಶುಲ್ಕ ಪಾವತಿಸದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಬಾರದು. ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ದೂರುಗಳು ದಾಖಲಾದಲ್ಲಿ ಅಂತಹ ಶಾಲೆಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಶಿಕ್ಷಣ ಹಕ್ಕು ಕಾಯ್ದೆಯಡಿ ಶಿಸ್ತು ಕ್ರಮ ವಹಿಸಲಾಗುವುದು ಎಂದು ಶಿಕ್ಷಣಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.