(ನ್ಯೂಸ್ ಕಡಬ)newskadaba.com ಜೂ. 9- ವಿಶ್ವದ ಬಹುತೇಕ ದೇಶಗಳಲ್ಲಿ ಕೊರೋನಾ ವೈರಸ್ ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡು ಬಂದಿದ್ದರೆ, ನ್ಯೂಜಿಲೆಂಡ್ ಈಗ ಈ ಪಿಡುಗಿನಿಂದ ಸಂಪೂರ್ಣ ಮುಕ್ತವಾಗುವತ್ತ ಹೆಜ್ಜೆ ಹಾಕಿದೆ.
ದೇಶದಲ್ಲಿ ಸೋಂಕಿಗೆ ಒಳಗಾಗಿದ್ದ ಕೊನೆಯ ವ್ಯಕ್ತಿ ರೋಗದಿಂದ ಚೇತರಿಸಿಕೊಂಡಿದ್ದು, ಯಾವುದೇ ಹೊಸ ಕೇಸ್‍ಗಳು ಪತ್ತೆಯಾಗಿಲ್ಲ. ನಮ್ಮ ದೇಶದಲ್ಲಿ ಸೋಂಕಿನಿಂದ ಬಳಲುತ್ತಿದ್ದ ಕೊನೆಯ ರೋಗಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‍ನಲ್ಲಿ ಕೊರೊನಾ ಸೋಂಕು ಹಬ್ಬುವುದನ್ನು ನಾವು ಪರಿಪೂರ್ಣವಾಗಿ ತಡೆಗಟ್ಟಿದ್ದೇವೆ ಹಾಗೂ ಮಹಾಮಾರಿಯನ್ನು ದೇಶದಿಂದ ನಿರ್ಮೂಲನೆ ಮಾಡಲಾಗಿದೆ ಎಂದು ಅಲ್ಲಿನ ಪ್ರಧಾನಮಂತ್ರಿ ತಿಳಿಸಿದ್ದಾರೆ.
ಕಳೆದ 17 ದಿನಗಳಿಂದ ನ್ಯೂಜಿಲೆಂಡ್‍ನ ಯಾವುದೇ ಭಾಗದಲ್ಲಿಯೂ ಹೊಸ ಕೋವಿಡ್ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿಲ್ಲ. 17 ದಿನಗಳಿಂದ ದೇಶದಲ್ಲಿ 40,000 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕಳೆದ 12 ದಿನಗಳಿಂದ ಯಾರೊಬ್ಬರೂ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಪ್ರಧಾನಿ ಜಸಿಂಡಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.