ವಿದ್ಯುತ್ ಬಿಲ್ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ➤ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು. ಜೂ. 7, ಲಾಕ್‌ಡೌನ್‌ ಸಮಯದಲ್ಲಿ ವಿದ್ಯುತ್‌ ಬಿಲ್‌ ಅಧಿಕ ಬಂದಿರುವುದಾಗಿ ಸಾರ್ವಜನಿಕರಿಂದ ವ್ಯಕ್ತವಾಗಿರುವ ಮನವಿಗಳಿಗೆ ತಕ್ಷಣ ಸ್ಪಂದಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಛೇರಿಯಲ್ಲಿ ಶನಿವಾರ ಇದರ ಕುರಿತಾಗಿ ಉನ್ನತ ಮಟ್ಟದ ಸಭೆ ನಡೆಸಿದ ಸಚಿವರು, ಮಾರ್ಚ್‌-ಎಪ್ರಿಲ್‌ ಬಿಲ್ಲನ್ನು ಒಟ್ಟಿಗೆ ನೀಡಿರುವುದರಿಂದ ಮೊತ್ತ ಅಧಿಕವಾಗಿರುವುದು ಸಹಜ. ಆದರೆ ಪ್ರತೀ ಯುನಿಟ್‌ ದರ ಲೆಕ್ಕ ಹಾಕುವಾಗ ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರಿಂದ ಅತೃಪ್ತಿ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಮೆಸ್ಕಾಂ ಸಾರ್ವಜನಿಕರ ಕುಂದು-ಕೊರತೆಗಳ ಸಭೆ ನಡೆಸಿ, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಬೇಕು. ಸಾಮಾಜಿಕ ಜಾಲತಾಣ, ಸಹಾಯವಾಣಿಗಳ ಮೂಲಕವೂ ದೂರುಗಳಿಗೆ ತ್ವರಿತ ಪರಿಹಾರ ನೀಡಬೇಕು. ಬಿಲ್‌ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಬೇಕು ಎಂದರು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹ‌ ಆರ್‌. ಮಾತನಾಡಿ, ಗ್ರಾಹಕರಿಗೆ ನಿಗದಿತ ದರದಲ್ಲಿಯೇ ಬಿಲ್‌ ನೀಡಲಾಗಿದ್ದು, ಯಾವುದೇ ಲೋಪವಾಗಿಲ್ಲ. ಬಡ್ಡಿ ಕೂಡ ಹಾಕಿಲ್ಲ. ಹೆಚ್ಚುವರಿಯಾಗಿ ಬಿಲ್‌ನಲ್ಲಿ ಮೊತ್ತ ನಮೂದಿಸಿದ್ದರೆ, ಮುಂದಿನ ಬಿಲ್‌ನಲ್ಲಿ ಹೊಂದಾಣಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಬಿಲ್‌ ಮೊತ್ತವನ್ನು ಕಂತುಗಳಾಗಿ ಪಾವತಿಸ ಬಹುದು. ಯಾವುದೇ ದೂರುಗಳಿಗೆ ಆಯಾ ಮೆಸ್ಕಾಂ ಉಪವಿಭಾಗದ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹರಿಸಿ ಕೊಳ್ಳಬಹುದು. ಸಹಾಯವಾಣಿ ಸಂಖ್ಯೆ 1912 ಅಥವಾ ವಾಟ್ಸ್‌ಆ್ಯಪ್‌ 9483041912ಕ್ಕೆ ದೂರು ನೀಡಬಹುದು ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.

error: Content is protected !!

Join the Group

Join WhatsApp Group