(ನ್ಯೂಸ್ ಕಡಬ)newskadaba.com ಹೊಸದಿಲ್ಲಿ. ಜೂ. 7, ಕೊರೋನ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಹಜ್ಜ್ ಪ್ರಕ್ರಿಯೆ ಕೈಗೊಳ್ಳುವ ಸಾಧ್ಯತೆಗಳಿಲ್ಲದಿರುವುದರಿಂದ ಹಜ್ಜ್ ಯಾತ್ರೆಗೆ ಬೇಕಾಗಿ ಕಟ್ಟಿದ ಹಣವನ್ನು ಮರುಪಾವತಿಸಲಾಗುವುದು ಎಂದು ಕೇಂದ್ರ ಹಜ್ಜ್ ಕಮಿಟಿ ಎಕ್ಸಿಕ್ಯೂಟಿವ್ ಆಫಿಸರ್ ಡಾ. ಮಕ್ಸೂದ್ ಅಹ್ಮದ್ ಖಾನ್ ರವರು ಸೂಚನೆ ನೀಡಿದ್ದಾರೆ. ಈ ವಿವರವನ್ನು ಕೇರಳ ಹಜ್ಜ್ ಕಮಿಟಿ ಅಧ್ಯಕ್ಷ ಸಿ. ಮುಹಮ್ಮದ್ ಫೈಝಿ ತಿಳಿಸಿದ್ದಾರೆಂದು ಪತ್ರಿಕೆ ವರದಿ ಮಾಡಿದೆ.
ಕೇಂದ್ರ ಹಜ್ಜ್ ಕಮಿಟಿಯು ಈ ಆದೇಶವನ್ನು ಹೊರಡಿಸಿದ್ದು, ಭಾರತದಿಂದ ಹಜ್ಜ್‌ಗೆ ವಿಮಾನ ಯಾನವನ್ನು ಜೂನ್‍ನ ಎರಡನೇ ವಾರದಿಂದ ಆರಂಭಿಸಬೇಕಾಗಿತ್ತು. ಆದರೆ ಕೊರೋನಾ ಪರಿಸ್ಥಿತಿಯಲ್ಲಿ ಬಹಳ ಸಮಯದಿಂದ ಸೌದಿ ಹಜ್ಜ್ ಸಚಿವಾಲಯದಿಂದ ಕೇಂದ್ರ ಹಜ್ಜ್ ಕಮಿಟಿಗೆ ಯಾವುದೇ ವಿವರ ಲಭ್ಯವಾಗುತ್ತಿಲ್ಲ. ಮಾರ್ಚ್ 13ರಂದು ಲಭಿಸಿದ ಸೂಚನೆಯ ಪ್ರಕಾರ ಕೊರೋನದಿಂದ ಹಜ್ಜ್ ಸಿದ್ಧತೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.
ಆದುದರಿಂದ ಹಜ್ಜ್‌ಗೆ ಅರ್ಜಿ ಹಾಕಿದವರ ಖಾತೆಗೆ ಹಣವನ್ನು ಮರಳಿಸಲು ಹಜ್ಜ್ ಸಮಿತಿ ನಿರ್ಧರಿಸಿದೆ ಎನ್ನಲಾಗಿದ್ದು, ಈ ವರ್ಷ ಹಜ್ಜ್‌ಗೆ ಆಯ್ಕೆಯಾದವರು 2ಲಕ್ಷ ರೂಪಾಯಿಯನ್ನು ಕಟ್ಟಿದ್ದರು. ಈ ವರ್ಷ ಹಜ್ಜ್ ಕಮಿಟಿಯು ಹಜ್ಜ್‌ಯಾತ್ರೆಗೆ 2 ಲಕ್ಷ ಜನರನ್ನು ಆಯ್ಕೆ ಮಾಡಿತ್ತು.