(ನ್ಯೂಸ್ ಕಡಬ)newskadaba.com ಕಡಬ. ಜೂ.6, ಕಡಬ ತಾಲೂಕಿನ ಕೋಡಿಂಬಾಳದಲ್ಲಿ ಡೆಂಗ್ಯೂ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯಾರಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೋಡಿಂಬಾಳ ಗ್ರಾಮದ ಮುಳಿಯ ನಿವಾಸಿಗಳಾದ ಲೋಹಿತ್, ತೇಜಸ್ವಿನಿ ಹಾಗೂ ಶೃತಿ ಎಂಬವರಿಗೆ ಡೆಂಗ್ಯೂ ಜ್ವರ ಪತ್ತೆಯಾಗಿತ್ತು. ಕಳೆದ ವರ್ಷ ಇದೇ ಪರಿಸರದಲ್ಲಿ ಮಹಿಳೆಯೊಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದರು, ಇದೀಗ ಮತ್ತೆ ಡೆಂಗ್ಯೂ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ತಂಡ ಜ್ವರ ಪೀಡಿತರ ಮನೆಗೆ ಭೇಟಿ ನೀಡಿ ಬಳಿಕ ಕಡಬ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿ ಪತ್ರಕರ್ತರೊಂದಿಗೆ ಮಾತನಾಡಿದರು. ಕೋಡಿಂಬಾಳದಲ್ಲಿ ಡೆಂಗ್ಯೂ ಪೀಡಿತರಲ್ಲಿ ಒಬ್ಬರು ಈಗಾಗಲೇ ಚೇತರಿಸಿಕೊಂಡಿದ್ದಾರೆ, ಇನ್ನಿಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ. ಜ್ವರ ಹೆಚ್ಚಾಗದಂತೆ ಮುಂಜಾಗೃತೆ ವಹಿಸಬೇಕಾಗಿದೆ ಎಂದರು.
ನಂತರ ಕಡಬ ಗ್ರಾಮ ಪಂಚಾಯಿತಿಯ ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಧಿಕಾರಿಯವರು ಇಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಹಸಿ ಕಸ ಮತ್ತು ಪ್ಲಾಸ್ಟಿಕ್‌ಗಳನ್ನು ಬೇರ್ಪಡಿಸುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಇದನ್ನು ಸರಿಪಡಿಸಬೇಕು ಎಂದು ಹೇಳಿದರು. ಮಾತ್ರವಲ್ಲ ಅಲ್ಲಲ್ಲಿ ಕಸ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು, ಡೆಂಗ್ಯೂ ನಿರ್ಮೂಲನೆಗೆ ಇಲಾಖೆಯೊಂದಿಗೆ ಕೈಜೋಡಿಸಬೇಕು, ಮನೆಯ ಸುತ್ತಮುತ್ತ ಮಳೆಯ ನೀರು ಅಥವಾ ಇನ್ನಿತರ ಕೊಳಚೆ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್ ಕುಲಾಲ್, ಕಡಬ ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ, ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ, ಸದಸ್ಯರಾದ ಸೈಮನ್ ಸಿ.ಜೆ ಮತ್ತಿತರರು ಉಪಸ್ಥಿತರಿದ್ದರು.