(ನ್ಯೂಸ್ ಕಡಬ) newskadaba.com ಕೇರಳ,ಜೂ 05: ಕೇರಳದಲ್ಲಿ ಗರ್ಭಿಣಿ ಆನೆಯ ಹತ್ಯೆಯಲ್ಲಿ ಭಾಗಿಯಾದ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ರಾಜ್ಯ ಅರಣ್ಯ ಸಚಿವರು ತಿಳಿಸಿದ್ದಾರೆ. ಗರ್ಭಿಣಿ ಆನೆಯನ್ನು ಪೈನಾಪಲ್ನಲ್ಲಿ ಸ್ಫೋಟಕ ಇರಿಸಿ ಹತ್ಯೆಗೈದಿರುವ ಘಟನೆಯ ಬಗ್ಗೆ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆನೆಯ ಹತ್ಯೆಯನ್ನು ಖಂಡಿಸಿದ್ದಲ್ಲದೆ, ತನಿಖೆಗೆ ಆದೇಶಿಸಿದ್ದರು.
ಸ್ಫೋಟಕವಿದ್ದ ಪೈನಾಪಲ್ ಸೇರಿದಂತೆ ಹಲವು ಹಣ್ಣುಗಳನ್ನು ಸೇವಿಸಿದ ಬಳಿಕ ಹಸಿವಿನಿಂದ ಆನೆಯು ಸಾವನ್ನಪ್ಪಿರಬಹುದು. ಸಾಮಾನ್ಯವಾಗಿ ಹಂದಿಯಂತಹ ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕಾಡಂಚಿನಲ್ಲಿರುವ ಜನರು ಸ್ಫೋಟಕವನ್ನು ಇಡುತ್ತಾರೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಬಂಧಿತ 40ರ ಹರೆಯದ ವ್ಯಕ್ತಿಯು ಸ್ವತಃ ಸ್ಫೋಟಕವನ್ನು ತಯಾರಿಸುತ್ತಿದ್ದಲ್ಲದೆ,ಇತರರಿಗೆ ಅದನ್ನು ಬಳಸಲು ಸಹಕರಿಸಿದ್ದಾನೆ ಎಂದು ಹಿರಿಯ ವನ್ಯಜೀವಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಇನ್ನಷ್ಟು ಶಂಕಿತರನ್ನು ಹುಡುಕುತ್ತಿದ್ದಾರೆ ಎಂದು ಅರಣ್ಯ ಸಚಿವ ಕೆ.ರಾಜು ತಿಳಿಸಿದ್ದಾರೆ.