ಮಂಗಳೂರು, ಜೂ.2: ದೇರಳಕಟ್ಟೆ ಬಿಎಸ್ಸೆನ್ನೆಲ್ ಉಪ ಕೇಂದ್ರದಲ್ಲಿ ಸರ್ವರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಿದ್ದು, ಸ್ಥಳದಲ್ಲಿಹೊಗೆಯ ವಾತಾವರಣವಿದೆ.
ಉಪಕೇಂದ್ರದಲ್ಲಿನ ಸರ್ವರ್ ರೂಂನಲ್ಲಿ ಕೂಲಿಂಗ್ ವ್ಯವಸ್ಥೆಯ ತಾಂತ್ರಿಕ ತೊಂದರೆಯಿಂದ ಉಷ್ಣತೆ ಹೆಚ್ಚಾಗಿ ಬೆಂಕಿ ಉತ್ಪತ್ತಿಯಾಗಿರುವ ಕುರಿತು ಸಂಶಯ ವ್ಯಕ್ತಪಡಿಸಲಾಗಿದೆ. ಈ ಅವಘಡದಿಂದಾಗಿ ಸುಮಾರು 4 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ರಾತ್ರಿ ವೇಳೆ ಸಿಬ್ಬಂದಿ ವ್ಯವಸ್ಥೆ ಇಲ್ಲದೆ ಸಮಸ್ಯೆ ಉದ್ಭವಿಸಿದೆ. ಖಾಸಗಿ ಕಟ್ಟಡದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು ದೇರಳಕಟ್ಟೆ ಜಂಕ್ಷನ್ ನಲ್ಲಿ ಕೇಂದ್ರ ಇರುವುದರಿಂದ ಸ್ಥಳೀಯವಾಗಿ ಮನೆ, ಅಂಗಡಿಮುಗ್ಗಟ್ಟು ಇರುವುದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ.
ಬಿಎಸ್ಸೆನ್ನೆಲ್ ಉಪಕೇಂದ್ರ ಅವಘಡದಿಂದ ಸ್ಥಳೀಯ ಬ್ಯಾಂಕ್ ಆಸ್ಪತ್ರೆಗಳ ಸರ್ವರ್, ಇಂಟರ್ ನೆಟ್ ಸೇರಿದಂತೆ ಸ್ಥಿರ ದೂರವಾಣಿ ಸ್ಥಗಿತಗೊಂಡಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.