(ನ್ಯೂಸ್ ಕಡಬ) newskadaba.com ಉಡುಪಿ,ಜೂ 02: ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಕೋವಿಡ್-19 ಸೋಂಕಿತರ ಸಂಖ್ಯೆ ಇಂದು ಉಡುಪಿಯಲ್ಲಿ ದೃಢವಾಗಿದೆ. ಇಂದು ಒಂದೇ ದಿನ ಉಡುಪಿ ಜಿಲ್ಲೆಯಲ್ಲಿ ಬರೋಬ್ಬರಿ 210 ಜನರಿಗೆ ಸೋಂಕು ದೃಢವಾಗಿದೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಆರ್ ಅಶೋಕ್, ಉಡುಪಿಯಲ್ಲಿ ಇಂದು 210 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ಧೃಡವಾಗಿದೆ. ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರಲ್ಲೇ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿರುವ ಕಾರಣ, ಮಹಾರಾಷ್ಟ್ರ ದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಆರ್. ಅಶೋಕ್ ಹೇಳಿದರು. ಜಿಲ್ಲೆಯಲ್ಲಿ ಈವರೆಗೆ 260 ಕೋವಿಡ್19 ಸೋಂಕು ಪ್ರಕರಣಗಳು ದೃಢವಾಗಿತ್ತು.
ಇಂದಿನ 210 ಹೊಸ ಪ್ರಕರಣಗಳು ಕಾರಣದಿಂದ ಜಿಲ್ಲೆಯ ಸೋಂಕಿತರ ಸಂಖ್ಯೆ 470ಕ್ಕೆ ಏರಿಕೆ ಕಂಡಿದೆ. ಸುಮಾರು ಒಂದು ತಿಂಗಳ ಹಿಂದೆ ಯಾವುದೇ ಸಕ್ರಿಯ ಪ್ರಕರಣಗಳಿಲ್ಲದೆ ನಿರಾಳವಾಗಿದ್ದ ಉಡುಪಿ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ರಾಕೆಟ್ ವೇಗದಲ್ಲಿ ಏರಿಕೆ ಕಾಣುತ್ತಿದೆ. ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯಗಳಿಂದ ಬಂದು ಕ್ವಾರಂಟೈನ್ ನಲ್ಲಿರುವ ಜನರ ಗಂಟಲು ದ್ರವ ವರದಿಗಳು ಜಿಲ್ಲಾಡಳಿತದ ಕೈ ಸೇರುತ್ತಿದೆ. ಸದ್ಯ ಕಂಡು ಬರುತ್ತಿರುವ ಸೋಂಕಿತರ ಪೈಕಿ ಬಹಳಷ್ಟು ಮಂದಿ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದರು. ಆದರೆ ಅವರ ಗಂಟಲು ದ್ರವ ವರದಿ ಸದ್ಯ ಜಿಲ್ಲಾಡಳಿತದ ಕೈ ಸೇರುತ್ತಿದೆ. ಮನೆಗೆ ಬಂದವರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಳ್ಳುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.