(ನ್ಯೂಸ್ ಕಡಬ) newskadaba.com ದಕ್ಷಿಣ ಕನ್ನಡ,ಜೂ.1: ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ ಒಂದೇ ದಿನದಲ್ಲಿ ಸೋಂಕು ಪತ್ತೆಯಾಗಿದೆ. ಕತಾರ್ ನಿಂದ ಬಂದಿದ್ದ ಇಬ್ಬರನ್ನು ಬೆಂಗಳೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು, ಮತ್ತೊಬ್ಬರು ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದರು. ಇವರನ್ನು ಮಂಗಳೂರಿನ ದೇರಳಕಟ್ಟೆಯಲ್ಲಿ ಕ್ವಾರಂಟೈನ್ ಗೆ ಒಳ ಪಡಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಸಿಂದು ಬಿ ರೂಪೇಶ್ ಹೇಳಿದ್ದಾರೆ.
ಹೊಸ ನಿಯಮದ ಪ್ರಕಾರ ರೋಗ ಲಕ್ಷಣವಿಲ್ಲದ ವ್ಯಕ್ತಿಗಳಿಗೆ ವಿದೇಶದಿಂದ ಮತ್ತು ರಾಜ್ಯದಿಂದ ಹಿಂದಿರುಗಿದ ನಂತರ ಯಾವುದೇ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ, ಆದರೆ ಹೊಸ ಮಾರ್ಗಸೂಚಿಗಳು ಜಾರಿಗೆ ಬರುವ ಮೊದಲು ಈ ಮೂವರ ಗಂಟಲಿನ ದ್ರಮದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಳಿಗೆ ಕಳುಹಿಸಲಾಗಿದೆ. ಪರೀಕ್ಷಾ ವರದಿಗಳು ಕಾಯುತ್ತಿರುವ ವ್ಯಕ್ತಿಗಳನ್ನು ಮನೆಗೆ ಕಳುಹಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಇದರ ಬಗ್ಗೆ ಸ್ಪಷ್ಟ ನಿರ್ದೇಶನವಿಲ್ಲ, ಈ ಸಂಬಂಧ ಪತ್ರ ಬರೆದು ಸ್ಪಷ್ಟನೆ ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸೋಂಕು ಪತ್ತೆಯಾದ ಮೂವರನ್ನು ಕೋವಿದ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ದಕ್ಷಿಣ ಕನ್ನಡದಲ್ಲಿ ಹೊಸದಾಗಿ 14 ಕೇಸ್ ಗಳು ಪತ್ತೆಯಾಗಿದ್ದು, ಅಧರಲ್ಲಿ 9 ಮಂದಿ ಮಹಾರಾಷ್ಟ್ರದಿಂದ ಮರಳಿದವರಾಗಿದ್ದಾರೆ.