(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.31: ದ.ಕ. ಜಿಲ್ಲೆಯಲ್ಲಿ ಶನಿವಾರದಂದು 14 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡ ದಿನದಂದು ಸುಮಾರು 184 ಮಂದಿಯ ವರದಿ ನೆಗೆಟಿವ್ ಬಂದಿದೆ. ಆ ಮೂಲಕ ಕರಾವಳಿ ಭಾಗದ ಜನರಲ್ಲಿ ಸ್ವಲ್ಪ ಆತಂಕ ದೂರವಾಗಿದೆ. ಇನ್ನು ಸೋಂಕು ಪತ್ತೆಯಾದವರ ಪೈಕಿ 13 ಮಂದಿ ಮುಂಬೈನಿಂದ ಮರಳಿದವರಾಗಿದ್ದಾರೆ. ಉಳಿದಂತೆ ಓರ್ವ ವ್ಯಕ್ತಿ ಉಳ್ಳಾಲದ ಸೋಮೇಶ್ವರ ಮೂಲದವರಾಗಿದ್ದು, ಸೋಂಕಿತರಿಗೆ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಶನಿವಾರದಂದು ಒಟ್ಟು 198 ಮಂದಿಯ ಕೋವಿಡ್ ಪರೀಕ್ಷಾ ವರದಿ ಕೈ ಸೇರಿದೆ. ಈ ಪೈಕಿ 184 ಮಂದಿಯ ವರದಿ ನೆಗೆಟಿವ್ ಬಂದಿದೆ.. ಇನ್ನು 349 ಮಂದಿಯ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ. 54 ಮಂದಿಯ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. 16 ಮಂದಿಯನ್ನು ನಿಗಾ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯ ತನಕ 4507 ಮಂದಿಯನ್ನು ಫಿವರ್ ಕ್ಲೀನಿಕ್ ಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕು ತಗುಲಿದವರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ಈ ಪೈಕಿ 68 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 44 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 7 ಮಂದಿ ಚಿಕಿತ್ಸೆ ಫಲಿಸದೆ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ.