(ನ್ಯೂಸ್ ಕಡಬ) newskadaba.com ಮುಂಬೈ, ಮೇ. 30 : ಬಾಲಿವುಡ್ ಖ್ಯಾತ ಗೀತ ರಚನೆಕಾರ ಯೋಗೇಶ್ ಗೌರ್ (77) ಅನಾರೋಗ್ಯ ಸಮಸ್ಯೆಯಿಂದ ಶುಕ್ರವಾರ ನಿಧನರಾಗಿದ್ದಾರೆ. ಯೋಗೇಶ್ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಅದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ನಿಧನರಾಗಿದ್ದಾರೆ. ಯೋಗೇಶ್ ಅವರು 70 ರ ದಶಕದ ಹಿಂದಿ ಚಿತ್ರರಂಗದಲ್ಲಿ ಪ್ರಮುಖ ಗೀತ ರಚನೆಕಾರರಾಗಿದ್ದರು.1960 ಮತ್ತು 70ರ ದಶಕದಲ್ಲಿ ಯೋಗೇಶ್ ಬೇಡಿಕೆಯ ಗೀತರಚನಾಕಾರ ಆಗಿದ್ದರು. ‘ಸಖಿ ರಾಬಿನ್’, ‘ಚೋಟಿ ಸಿ ಬಾತ್’, ‘ಬಾತೋ ಬಾರೋ ಮೆ’, ‘ಮನ್‌ಜಿಲ್’, ‘ಆನಂದ್’ ಮುಂತಾದ ಸಿನಿಮಾಗಳಿಗೆ ಅವರು ಹಾಡು ಬರೆದಿದ್ದರು. ರಿಷಿಕೇಶ್ ಮುಖರ್ಜಿ, ಬಸು ಚಟರ್ಜಿ ಮುಂತಾದ ಖ್ಯಾತ ನಿರ್ದೇಶಕರ ಜೊತೆ ಯೋಗೇಶ್ ಕೆಲಸ ಮಾಡಿದ್ದರು. ‘ನಿಜ ಜೀವನದ ಘಟನೆಗಳಿಂದಲೇ ಸ್ಫೂರ್ತಿಗೊಂಡು ನಾನು ಸಾಹಿತ್ಯ ಬರೆಯುತ್ತೇನೆ. ನನ್ನ ಕಣ್ಣಿಗೆ ಕಂಡಿದ್ದು ಮತ್ತು ನಾನು ಜೀವಿಸಿದ್ದನ್ನು ಆಧರಿಸಿ ಬರೆಯುತ್ತೇನೆ’ ಎಂದು ಯೋಗೇಶ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಯೋಗೇಶ್ ಅವರ ನಿಧನಕ್ಕೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಬರಹಗಾರ ಗೀತ ರಚನೆಕಾರ ವರುಣ್ ಗ್ರೋವರ್ ಸೇರಿದಂತೆ ಸಿನಿಮಾ ರಂಗ ಸಂತಾಪ ಸೂಚಿಸಿದೆ.