(ನ್ಯೂಸ್ ಕಡಬ) newskadaba.com ದೆಹಲಿ,ಮೇ.28: ಲಾಕ್ ಡೌನ್ ನಿಂದಾಗಿ ಅದೆಷ್ಟೋ ದೊಡ್ಡ ದೊಡ್ಡ ಕಂಪನಿಗಳು ನೌಕರರ ವೇತನ ಕಡಿತಗೊಳಿಸಿ, ನೌಕರರನ್ನು ಬೀದಿಗೆ ತಳ್ಳಿದೆ. ಅಂತಹ ಕಂಪನಿಯ ಮಾಲೀಕರಿಗೆ ಸೆಡ್ಡು ಹೊಡೆಯುವ ಕೆಲಸವನ್ನ ಇಲ್ಲೋಬ್ಬ ರೈತ ಮಾಡಿ ದಿಟ್ಟತನ ಮೆರೆದಿದ್ದಾನೆ. ಹೌದು ದೆಹಲಿಯ ರೈತನೊಬ್ಬ ತನ್ನಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಕಾರ್ಮಿಕರನ್ನ ವಿಮಾನದ ಮೂಲಕ ತವರಿಗೆ ಕಳುಹಿಸಿ ಎಲ್ಲಾರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಎರಡು ತಿಂಗಳಿನಿಂದ ತವರಿಗೆ ಮರಳಲಾಗದೇ ಪರಿತಪಿಸುತ್ತಿದ್ದ ಬಿಹಾರದ ಕಾರ್ಮಿಕರ ಖುಷಿಗೆ ಪಾರವೇ ಇರಲಿಲ್ಲ. ಮನೆಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೆ ಕಾರ್ಮಿಕರು ಪರದಾಡುತ್ತಿರುವ ಸಮಯದಲ್ಲಿ ತನ್ನ 10 ಕಾರ್ಮಿಕರನ್ನ ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿಕೊಟ್ಟು ರೈತ ಮಾನವೀಯತೆ ಮೆರೆದಿದ್ದಾನೆ. ಕಾರ್ಮಿಕರು ಇಂದು (ಗುರುವಾರ) ಬೆಳಗ್ಗೆ 6 ಗಂಟೆ ಗೆ ವಿಮಾನದ ಮೂಲಕ ತಮ್ಮ ಊರು ಸೇರಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಮಿಕ ಲಖೀಂದರ್ ರಾಮ್, ನಾವು ಕನಸು ಮನಸಿನಲ್ಲೂ ವಿಮಾನ ಪ್ರಯಾಣ ಬೆಳೆಸುತ್ತೇವೆ ಎಂದುಕೊಂಡಿರಲಿಲ್ಲ. ಖುಷಿಯನ್ನು ಹೇಳಿಕೊಳ್ಳಲು ಶಬ್ದಗಳಿಲ್ಲ ಎಂದಿದ್ದಾರೆ. ರೈತ ಮಾಡಿದ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.