(ನ್ಯೂಸ್ ಕಡಬ) newskadaba.com ಕಡಬ, ಮೇ.25. ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿ ಒಂದು ವರ್ಷದ ಬಳಿಕ ಗುದ್ದಲಿ ಪೂಜೆ ನಡೆದಿದ್ದು, ಈ ಮೂಲಕ ಕಾಮಗಾರಿಗೆ ಮತ್ತೆ ಜೀವ ಕಳೆ ಬಂದಂತಾಗಿದೆ.
ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದೇ ಸೂರಿನಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳನ್ನು ತೆರೆಯಬೇಕು ಎನ್ನುವ ಸರಕಾರದ ಆಶಯದಂತೆ ಕಡಬದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ತಹಶೀಲ್ದಾರ್ ಕಚೇರಿ ಬಳಿ ಸೋಮವಾರದಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಗುದ್ದಲಿ ಪೂಜೆಗೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಿನಿ ವಿಧಾನಕ್ಕಾಗಿ ಈಗ ಬಿಡುಗಡೆಯಾಗಿರುವ ಅನುದಾನದ ಜೊತೆಗೆ ಹೆಚ್ಚುವರಿ ಅನುದಾನಕ್ಕಾಗಿ ಕಂದಾಯ ಸಚಿವರ ಗಮನಕ್ಕೆ ತರಲಾಗುವುದು. ಅಲ್ಲದೆ ತಾಲೂಕು ಕೇಂದ್ರದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗೆ ಒತ್ತು ನೀಡುವಂತೆ ಸೂಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ರಾಜಕೀಯ ಪ್ರಮುಖರು, ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಗ್ರಾ.ಪಂ. ಸದಸ್ಯರು, ಹಾಜರಿದ್ದರು. ತಹಶೀಲ್ದಾರ್ ಕಚೇರಿ ಬಳಿ ಸರ್ವೆ ನಂಬ್ರ 130/1ಎಪಿ2ರಲ್ಲಿ 1.60 ಎಕರೆ ಜಮೀನು ಕಾದಿರಿಸಲಾಗಿದ್ದು ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದೆ.