ಇಸ್ಲಾಮಾಬಾದ್, ಮೇ 22: ‘ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್‌ಲೈನ್ಸ್’ಗೆ (ಪಿಐಎ) ಸೇರಿದ, ಸಿಬ್ಬಂದಿಯೂ ಸೇರಿ 107 ಜನರಿದ್ದ ವಿಮಾನವೊಂದು ಕರಾಚಿಯಲ್ಲಿ ಪತನಗೊಂಡಿದೆ.
ವಿಮಾನವು ಲಾಹೋರ್‌ನಿಂದ ಕರಾಚಿಗೆ ತೆರಳುತ್ತಿತ್ತು. ಲ್ಯಾಂಡಿಂಗ್‌ಗೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಪತನಗೊಂಡಿದೆ. ವಿಮಾನದಲ್ಲಿದ್ದವರ ಪೈಕಿ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಕರಾಚಿ ವಿಮಾನ ನಿಲ್ದಾಣಕ್ಕೆ ಸನಿಹದಲ್ಲೇ ಇರುವ ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ಆ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿರುವುದನ್ನು ಸ್ಥಳೀಯ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ.
ಕರಾಚಿಯಲ್ಲಿ ವಿಮಾನ ಪತನವಾಗಿದೆ. ಎಷ್ಟು ಮಂದಿ ಪ್ರಯಾಣಿಕರು ಇದ್ದರು ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಪ್ರಾಥಮಿಕ ಮಾಹಿತಿ ಪ್ರಕಾರ ವಿಮಾನದಲ್ಲಿ 99 ಪ್ರಯಾಣಿಕರು ಮತ್ತು 8 ಸಿಬ್ಬಂದಿ ಇದ್ದರೆಂಬುದು ತಿಳಿದುಬಂದಿದೆ ಎಂದು ಪಾಕಿಸ್ತಾನದ ವಿಮಾನಯಾನ ಪ್ರಾಧಿಕಾರದ ವಕ್ತಾರ ಅಬ್ದುಲ್ ಸತ್ತಾರ್ ತಿಳಿಸಿದ್ದಾರೆ.
Initial footage from near the blast site – the magnitude of the damage is huge. #PIA #ModelColony #MalirCantt #Karachi #Pakistan pic.twitter.com/n2EI3OnSom
— Yusra Askari (@YusraSAskari) May 22, 2020
ಪಾಕಿಸ್ತಾನ ಸೇನೆಯ ಕ್ಷಿಪ್ರ ಕಾರ್ಯಾಚರಣೆ ಪಡೆಯು ಸ್ಥಳಕ್ಕೆ ಧಾವಿಸಿದ್ದು, ರಕ್ಷಣೆ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.