ಜೂ.18ಕ್ಕೆ ಪಿಯುಸಿ ಇಂಗ್ಲಿಷ್, ಜೂ.25ರಿಂದ ಎಸೆಸೆಲ್ಸಿ ಪರೀಕ್ಷೆ

ಬೆಂಗಳೂರು, ಮೇ 18: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂದೂಡಲಾಗಿರುವ ಎಸೆಸೆಲ್ಸಿ ಪರೀಕ್ಷೆಯನ್ನು ಜೂನ್ 25ರಿಂದ ಜುಲೈ 4 ರವರೆಗೆ, ಪಿಯುಸಿಯ ಇಂಗ್ಲೀಷ್ ಪರೀಕ್ಷೆಯನ್ನು ಜೂನ್ 18ರಂದು ನಡೆಸಲು ಸರಕಾರ ತೀರ್ಮಾನಿಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಎಸೆಸೆಲ್ಸಿ ಪರೀಕ್ಷೆ ಬದಲಾದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಕೊಠಡಿ ಬಳಸುತ್ತೇವೆ. 2,879 ಪರೀಕ್ಷಾ ಕೇಂದ್ರಗಳಲ್ಲಿ 43,720 ಕೊಠಡಿ ಬಳಸುತ್ತಿದ್ದೇವೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ಪ್ರತಿ ಸಭಾಂಗಣದಲ್ಲಿ ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡುತ್ತೇವೆ. ಪ್ರತಿ ವಿದ್ಯಾರ್ಥಿ ಮಾಸ್ಕ್ ಕಡ್ಡಾಯ ಮಾಡುತ್ತಿದ್ದೇವೆ. ಇದಕ್ಕಾಗಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ನಿಂದ ಎಸೆಸೆಲ್ಸಿ ಮಕ್ಕಳಿಗೆ ಮಾಸ್ಕ್ ನೀಡಲಿದ್ದಾರೆ. ಶಿವನ ಹಳ್ಳಿ ರಾಮಕೃಷ್ಣ ಮಿಷನ್ ನಿಂದ 2 ಲಕ್ಷ ಮಾಸ್ಕ್ ಬೆಂಗಳೂರು ದಕ್ಷಿಣ, ರಾಮನಗರಕ್ಕೆ ನೀಡಲಿದ್ದಾರೆ. ಒಬ್ಬೊಬ್ಬ ವಿದ್ಯಾರ್ಥಿಗೆ ಎರಡು ಮಾಸ್ಕ್ ಸಿಗಲಿದೆ ಎಂದರು.

ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಇದ್ದರೆ ಬೇರೆ ಕಡೆ ಪರೀಕ್ಷೆ ಬರೆಯಲು ಅವಕಾಶ ಮಾಡುತ್ತೇವೆ. ಪರೀಕ್ಷೆ ಆರಂಭಕ್ಕೂ ಮೊದಲು ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡುತ್ತೇವೆ ಎಂದರು.

ಎಸೆಸೆಲ್ಸಿಯ ಇಂಗ್ಲೀಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳಿಗೆ ಒಂದೊಂದು ದಿನದ ಅಂತರವಿರಲಿದೆ. ಒಟ್ಟಾರೆ ಎಲ್ಲಾ ಪರೀಕ್ಷೆಗಳು 10 ದಿನದಲ್ಲಿ ಮುಗಿಯಲಿದೆ ಎಂದರು.

ಮೊರಾರ್ಜಿ ದೇಸಾಯಿ ಶಾಲೆ, ಎಸೆಸೆಲ್ಸಿ ಹಾಸ್ಟಲ್‌ಗಳನ್ನು ಕ್ವಾರಂಟೈನ್ ಮಾಡಿರುವ ಕಾರಣ ಅಲ್ಲಿನ ವಿದ್ಯಾರ್ಥಿಗಳು ಹತ್ತಿರದ ಶಾಲೆಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಗುವುದು. ವಲಸೆ ಕಾರ್ಮಿಕರ ಮಕ್ಕಳಿಗೆ ಕೂಡಾ ಇದೇ ರೀತಿ ವ್ಯವಸ್ಥೆ ಮಾಡಲಾಗುವುದು ಎಂದರು.

error: Content is protected !!

Join the Group

Join WhatsApp Group