ಬೆಂಗಳೂರು, ಮೇ 17: ಲಾಕ್‌ಡೌನ್ ಮೂರನೇ ಹಂತದ ಮುಕ್ತಾಯದ ಹಂತದಲ್ಲಿ ಆದಷ್ಟು ಬೇಗ ಶಾಲೆಗಳು ಪುನರಾರಂಭ ಆಗಬಹುದೆಂಬ ವದಂತಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇತಿಶ್ರೀ ಹಾಡಿದ್ದಾರೆ.
ಸದ್ಯಕ್ಕೆ ಶಾಲೆಗಳು ತೆರೆಯುವುದಿಲ್ಲ. ಈ ವಿಷಯದಲ್ಲಿ ಸರಕಾರ ಯಾವುದೇ ತರಾತುರಿಯಲ್ಲಿ ಇಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ. ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು. ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸುರೇಶ್ ಹೇಳಿದ್ದಾರೆ.
ಇಲಾಖಾ ಮಟ್ಟದಲ್ಲಿ ತಯಾರಾದ ಶಾಲಾ ಮಾರ್ಗಸುಚಿಯನ್ನೇ ಆಧಾರವಾಗಿಟ್ಟುಕೊಂಡು ಶಾಲೆಗಳು ಶೀಘ್ರವೇ ತೆರೆಯಲಿವೆ ಎಂದು ಮಾಧ್ಯಮಗಳು ವರದಿ ಮಾಡುತ್ತಲೇ ಇವೆ. ಶಾಲೆಗಳಲ್ಲಿ ಪಾಳಿ ಮಾದರಿ ಅನುಸರಿಸಲಾಗುತ್ತದೆ. ಯಾವಾಗ ಯಾವ ಪಾಳಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ತೀರ್ಮಾನವಾಗಿದೆ ಎಂದು ವರದಿಗಳು ಹರಿದಾಡಿದ್ದವು. ಆದರೆ ಸುರೇಶ್ ಕುಮಾರ್ ಅವರ ಸ್ಪಷ್ಟನೆ ಹಿನ್ನೆಲೆಯಲ್ಲಿ ಈ ವದಂತಿಗಳಿಗೆ ತೆರೆ ಬಿದ್ದಿದೆ.
ಆದರೆ ಈ ವರದಿಗಳು ಕೇವಲ ಕಪೋಲಕಲ್ಪಿತ ಮತ್ತು ಆಧಾರ ರಹಿತ ಎಂದು ಸಚಿವರು ಮಾತ್ರವಲ್ಲದೇ ಇಲಾಖೆಯೂ ಸ್ಪಷ್ಟೀಕರಣ ನೀಡಿದೆ. ಶಾಲೆಗಳಲ್ಲಿ ಇನ್ನೂ ಪ್ರವೇಶ ಪ್ರಕ್ರಿಯೆ ಸಹ ಆರಂಭವಾಗಿಲ್ಲ. ಲಾಕ್‌ಡೌನ್ ಯಾವಾಗ ಮುಗಿಯುತ್ತೆ ಎಂಬುದು ಖಚಿತವಾಗಿಲ್ಲ. ಹೀಗಿರುವಾಗ ಶಾಲೆಗಳನ್ನು ತೆರೆಯಲು ಹೇಗೆ ಸಾಧ್ಯ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆಯಬೇಕಿದ್ದ ಎಸ್ಸೆಸ್ಸೆಲ್ಸಿ ಮತ್ತು ಬಾಕಿ ಉಳಿದಿದ್ದ ಪಿಯುಸಿ ಎರಡನೇ ವರ್ಷದ ಇಂಗ್ಲಿಷ್ ವಿಷಯದ ಪರೀಕ್ಷೆಗಳು ಇನ್ನೂ ನಡೆಯಬೇಕಿದೆ. ಇದಕ್ಕೂ ಯಾವುದೇ ದಿನಾಂಕ ನಿಗದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.