(ನ್ಯೂಸ್ ಕಡಬ) newskadaba.com ಕಡಬ, ಮೇ.15. ಚಿಕ್ಕಮಗಳೂರುನಿಂದ ಕಡಬಕ್ಕೆ ಆಗಮಿಸಿ ಕ್ವಾರಂಟೈನ್ ನಲ್ಲಿ ಇರಬೇಕಾಗಿದ್ದ ಮೈಕ್ರೋ ಫೈನಾನ್ಸ್‌ವೊಂದರ ಮ್ಯಾನೇಜರ್ ಕಛೇರಿಯಲ್ಲಿ ಇತರ ಸಿಬ್ಬಂದಿಗಳೊಂದಿಗೆ ಕಳೆದ ಎಂಟು ದಿನಗಳಿಂದ ಕೆಲಸ ನಿರ್ವಹಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಕಡಬ ಗ್ರಾಮ ಪಂಚಾಯತ್ ಕೋವಿಡ್ ಕಾರ‍್ಯಪಡೆಯ ಅಧಿಕಾರಿಗಳು ಕಛೇರಿಯಲ್ಲಿದ್ದ ಸಿಬ್ಬಂದಿಗಳಿಗೆ ರಜೆ ನೀಡಿ, ಕಛೇರಿಯಲ್ಲೇ ಮ್ಯಾನೇಜರ್‌ಗೆ ಕ್ವಾರಂಟೈನ್ ಮಾಡಿಸಿದ ಘಟನೆ ಶುಕ್ರವಾರದಂದು ನಡೆದಿದೆ.
ಕಡಬದಲ್ಲಿ ಕಾರ‍್ಯಾಚರಿಸುತ್ತಿದ್ದ ಮೈಕ್ರೋ ಫೈನಾನ್ಸ್‌ವೊಂದರ ಮ್ಯಾನೇಜರ್ ಚಿಕ್ಕಮಗಳೂರಿನಿಂದ ಮೇ 6 ರಂದು ಕಡಬಕ್ಕೆ ಆಗಮಿಸಿದ್ದರು. ಈ ವೇಳೆ ಅವರಿಗೆ ಗುಂಡ್ಯ ಚೆಕ್‌ಪೋಸ್ಟಲ್ಲಿ ಸೀಲ್ ಹಾಕಿ ಕ್ವಾರಂಟೈನ್‌ನಲ್ಲಿರುವಂತೆ ಸೂಚನೆ ನೀಡಲಾಗಿತ್ತು. ಕಡಬಕ್ಕೆ ಆಗಮಿಸಿದ ಮ್ಯಾನೇಜರ್ ಕ್ವಾರಂಟೈನ್ ಸೂಚನೆಗಳನ್ನು ಲೆಕ್ಕಿಸದೆ ಸುಮಾರು 10-12 ಸಿಬ್ಬಂದಿಗಳ ಜತೆ ಕೆಲಸ ನಿರ್ವಹಿಸುತ್ತಿದ್ದರು, ಮ್ಯಾನೇಜರ್ ಕಡಬಕ್ಕೆ ಬಂದಿರುವ ಮಾಹಿತಿ ಅಧಿಕಾರಿಗಳಿಗೆ ದೊರೆತಿದೆಯಾದರೂ ಮ್ಯಾನೇಜರ್ ಅಧಿಕಾರಿಗಳ ದೂರವಾಣಿ ಕರೆಯನ್ನು ಸ್ವೀಕರಿಸಿದೆ ಇರುವ ಕಾರಣ ಕೋವಿಡ್ ಅಧಿಕಾರಿಗಳು ಆತನನ್ನು ಹುಡುಕಾಡಿದ್ದರು. ಶುಕ್ರವಾರದಂದು ಫೈನಾನ್ಸ್ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಮಾಹಿತಿ ದೊರೆತ ಅಧಿಕಾರಿಗಳು ಕಛೇರಿಗೆ ತೆರಳಿ ಪರಿಶೀಲನೆ ನಡೆಸಿದಾಗ ಮಾಸ್ಕ್ ಧರಿಸದೆ, ಇತರ ಸಿಬ್ಬಂದಿಗಳ ಜತೆ ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಮಾತ್ರವಲ್ಲದೆ ಮ್ಯಾನೇಜರ್ ಕೈಗೆ ಹಾಕಿದ್ದ ಸೀಲ್ ಕೂಡ ಮಾಸಿತ್ತು, ಈ ಬಗ್ಗೆ ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು ಕಛೇರಿ ಇರುವ ಕಟ್ಟಡದ ಮಾಲಕರನ್ನು ಕರೆಯಿಸಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಬಳಿಕ ಮಾತುಕತೆ ನಡೆಸಿ ಕಛೇರಿಯಲ್ಲಿರುವ ಸಿಬ್ಬಂದಿಗಳನ್ನು ಮನೆಗೆ ಕಳುಹಿಸಿ ವಸತಿ ವ್ಯವಸ್ಥೆ ಇರುವ ಕಛೇರಿಯಲ್ಲಿ ಮ್ಯಾನೇಜರನ್ನು ಕ್ವಾರಂಟೈನ್ ಮಾಡುವಂತೆ ಸೂಚಿಸಲಾಯಿತು, ಇದಕ್ಕೆ ಕಟ್ಟಡ ಮಾಲಕರು ಜವಾಬ್ದಾರಿ ತೆಗೆದುಕೊಂಡು ನಿಯಮ ಪಾಲಿಸುವುದಾಗಿ ಒಪ್ಪಿಕೊಂಡರು. ಬಳಿಕ ಸೀಲ್ ಹಾಕಿದ ಅಧಿಕಾರಿಗಳು ಇನ್ನು 14 ದಿನ ಕ್ವಾರಂಟೈನ್‌ನಲ್ಲಿರುವಂತೆ ಸೂಚನೆ ನೀಡಿದರು. ಕಡಬ ಗ್ರಾಮಕರಣಿಕ ಹರೀಶ್ ಕುಮಾರ್, ಸಹಾಯಕ ವಿಜಯ ಕುಮಾರ್, ಪಂಚಾಯತ್ ಸಿಬ್ಬಂದಿ ಹರೀಶ್ ಬೆದ್ರಾಜೆ, ಕಡಬ ಠಾಣಾ ಎ.ಎಸ್.ಐ, ಚಂದ್ರಶೇಖರ್ ಮೊದಲಾದವರು ಕಾರ‍್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.