ಉಡುಪಿ: ಮೇ 18ರಿಂದ ಸೆಲೂನ್ ಆರಂಭ

ಉಡುಪಿ, ಮೇ 14: ಜಿಲ್ಲೆಯಾದ್ಯಂತ ಮೇ 18ರಿಂದ ಸೆಲೂನುಗಳನ್ನು ಪುನರಾರಂಭಿಸಲು ಷರತ್ತು ಬದ್ದ ಅನುಮತಿ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆಯಂಗಡಿ ತಿಳಿಸಿದ್ದಾರೆ.

ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ 13ರಂದು ಜಿಲ್ಲಾ ಸವಿತಾ ಸಮಾಜದ ನಿಯೋಗವು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸದ್ಯದ ಪರಿಸ್ಥಿತಿಗಳನ್ನು ವಿವರಿಸಿದೆ. ಕೊರೋನ ಸಮಸ್ಯೆಯಿಂದ ದೇಶವೇ ತತ್ತರಿಸುತ್ತಿದ್ದಾಗ ಲಾಕ್‌ಡೌನ್ ಮಾಡುವ ಮೂರು ದಿನಗಳ ಹಿಂದೆಯೇ ಕ್ಷೌರಿಕ ಬಂಧುಗಳು ಅಂಗಡಿಗಳನ್ನು ಮುಚ್ಚಿ ಬೆಂಬಲವನ್ನು ಸೂಚಿಸಿದ್ದಾರೆ. ಕ್ಷೌರಿಕ ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಉದ್ಯಮಿ ನಾಡೋಜ ಡಾ.ಜಿ.ಶಂಕರ್ ಮತ್ತು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮೂಲಕ ಜಿಲ್ಲೆಯ ಎಲ್ಲ ಕ್ಷೌರಿಕರಿಗೆ ಹಾಗೂ ಬಡ ಅರ್ಹ ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ಸಾಮಗ್ರಿಗಳುಳ್ಳ ಕಿಟ್‌ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ತಾಲೂಕು, ವಲಯ ಘಟಕಗಳ ಪದಾಧಿಕಾರಿಗಳಿಗೆ ಹಾಗೂ ಸವಿತಾ ಸೌಹಾರ್ದ ಸೊಸೈಟಿ ಕೂಡ ಸ್ಪಂದಿಸಿದೆ. ಇತ್ತೀಚೆಗೆ ರಾಜ್ಯ ಸರಕಾರ ಕ್ಷೌರಿಕರಿಗಾಗಿ 5 ಸಾವಿರ ರೂ. ಆರ್ಥಿಕ ನೆರವು ಘೋಷಿಸಿದ್ದು, ಸಂಬಂಧಪಟ್ಟ ಇಲಾಖೆಯ ಮೂಲಕ ಆದಷ್ಟು ಶೀಘ್ರ ಇದು ಅರ್ಹರಿಗೆ ತಲುಪುವಂತಾಗಬೇಕು ಎಂದರು.

Also Read  ಕೆರೆಗೆ ಹಾರಿ ಯುವತಿ ಆತ್ಮಹತ್ಯೆ

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ ಸಾಲ್ಯಾನ್ ಆದಿಉಡುಪಿ, ಗೌರವಾಧ್ಯಕ್ಷ ಗೋವಿಂದ ಭಂಡಾರಿ, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ.ಭಂಡಾರಿ ಕಿನ್ನಿಮೂಲ್ಕಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಯು.ಶಂಕರ್ ಸಾಲ್ಯಾನ್ ಕಟಪಾಡಿ ಉಪಸ್ಥಿತರಿದ್ದರು.

error: Content is protected !!
Scroll to Top