ಬೆಂಗಳೂರು, ಎ.7: ರಾಜ್ಯದಲ್ಲಿ ಇಂದು ಹೊಸದಾಗಿ 12 ಕೊರೋನ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ.
ಈ ನಡುವೆ ದಾವಣಗೆರೆಯ 55 ವರ್ಷದ ಮಹಿಳೆಯೋರ್ವರು ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯ ಸರಕಾರ ಹೊರಡಿಸಿದ ಬುಲೆಟಿನ್ ನಲ್ಲಿರುವಂತೆ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದ್ದು, ಈ ಪೈಕಿ 30 ಮಂದಿ ಸಾವನ್ನಪ್ಪಿದ್ದರೆ, 366 ಮಂದಿ ಗುಣಮುಖರಾಗಿದ್ದಾರೆ.
ಬೆಳಗ್ಗೆ 8 ಪ್ರಕರಣಗಳು ಪತ್ತೆಯಾಗಿದ್ದವು. ದಾವಣಗೆರೆಯಲ್ಲಿ ಇಂದು ಮೃತಪಟ್ಟ 55 ವರ್ಷದ ಮಹಿಳೆ, ಜ್ವರದ ಲಕ್ಷಣಗಳನ್ನು ಹೊಂದಿದ್ದ 53 ಹಾಗೂ 40 ವರ್ಷದ ಮಹಿಳೆಯರು, ಕಲಬುರಗಿಯಲ್ಲಿ ಸೋಂಕಿತರ ಸಂಪರ್ಕ ಹೊಂದಿದ್ದ 35 ಹಾಗೂ 36 ವರ್ಷದ ವ್ಯಕ್ತಿಗಳು, ಬೆಳಗಾವಿಯ ಹಿರೇಬಾಗೇವಾಡಿಯ 13 ವರ್ಷದ ಬಾಲಕಿ, ಬೆಂಗಳೂರು ನಗರದ 49 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಸಂಜೆ ವೇಳೆಗೆ ಹೊಸದಾಗಿ 4 ಪ್ರಕರಣಗಳು ಪತ್ತೆಯಾಗಿದ್ದು, ಬಾಗಲಕೋಟೆಯಲ್ಲಿ 3 ಮತ್ತು ಧಾರವಾಡದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಬಾಗಲಕೋಟೆಯ ಬಾದಾಮಿಯ ಗರ್ಭಿಣಿ ಮಹಿಳೆಯ ಸೋಂಕಿನಿಂದ ಮತ್ತೆ ಮೂವರಿಗೆ ಸೋಂಕು ತಗುಲಿದೆ. ಒಂದೇ ಗ್ರಾಮದ 80 ವರ್ಷದ ವೃದ್ಧೆ, 55 ವರ್ಷದ ಮಹಿಳೆ ಮತ್ತು 19 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ. ಧಾರವಾಡದ 35 ವರ್ಷದ ವ್ಯಕ್ತಿಗೆ ಕೂಡ ಸೋಂಕು ತಗಲಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟನೆ ತಿಳಿಸಿದೆ.