(ನ್ಯೂಸ್ ಕಡಬ) newskadaba.com ಕಡಬ, ಮೇ.05. ಮಂಗಳವಾರ ಸಂಜೆ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಕಡಬ ತಾಲೂಕಿನ ವಿವಿಧೆಡೆ ಹಲವು ಮನೆಗಳಿಗೆ, ವಿದ್ಯುತ್ ಕಂಬಗಳು ಸೇರಿದಂತೆ ಅಪಾರ ಕೃಷಿ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಕಡಬ ತಾಲೂಕಿನ ಪೆರಾಬೆ ಗ್ರಾಮದ ಕೋಚಕಟ್ಟೆ ಎಂಬಲ್ಲಿನ ಮೈಮೂನ, ಹಂಝ ಕೋಚಕಟ್ಟೆ, ಹಮೀದ್, ಅಶ್ರಫ್ ಚಿಕನ್, ಮೈಮೂನ ಎಂಬವರ ಮನೆಗೆ ಹಾನಿಯಾಗಿದೆ. ಆಲಂಕಾರು ಜಂಕ್ಷನ್ ನಲ್ಲಿನ ಅಂಗಡಿಯೊಂದರ ಮೇಲ್ಛಾವಣಿ ಹಾರಿ ಹೋಗಿದೆ. ಕೋಚಕಟ್ಟೆ ನೂರುಲ್ ಹುದಾ ಮದರಸದ ಶೆಡ್ ಗೆ ಹಾನಿಯಾಗಿದೆ. ಕಡಬ, ಬಿಳಿನೆಲೆ, ಪಂಜ, ನೆಲ್ಯಾಡಿ, ಇಚಿಲಂಪಾಡಿ, ಆಲಂಕಾರು, ಆತೂರು ಪರಿಸರದಲ್ಲಿ ಅಪಾರ ಕೃಷಿಗೆ ಹಾನಿಯಾಗಿವೆ. ಇಚಿಲಂಪಾಡಿ ಸಮೀಪದ ಮಂಜೋಳಿ ಎಂಬಲ್ಲಿನ ಮನೆಗೆ ಹಾನಿಯಾಗಿದೆ. ಕಡಬ ಪೇಟೆಯ ದುರ್ಗಾಂಬಿಕಾ ದೇವಸ್ಥಾನದ ಬಳಿ ಹಾಗೂ ಕುಂತೂರು ಜಂಕ್ಷನ್‌ನಲ್ಲಿರುವ ಭಜನಾ ಮಂದಿರದ ಬಳಿ ವಿದ್ಯುತ್ ಲೈನ್ ಗೆ ಮರದ ಕೊಂಬೆ ಬಿದ್ದು ಕಂಬ ಮುರಿದಿದೆ. ನೂಜಿಬಾಳ್ತಿಲದ ನೂಜಿ ದೇವಸ್ಥಾನ ರಸ್ತೆ, ಇಚಿಲಂಪಾಡಿ ಕಲ್ಲುಗುಡ್ಡೆ ರಸ್ತೆ, ಗೋಳಿಯಡ್ಕ ಕಲ್ಲುಗುಡ್ಡೆ ರಸ್ತೆ ಬದಿಯಲ್ಲಿದ್ದ ಮರ ಬಿದ್ದುದರಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಕೊಯಿಲ ಗ್ರಾಮದ ಕೊಲ್ಯ, ಪರಂಗಾಜೆ, ಬುಡಳೂರು, ಸಬಳೂರು ಭಾಗದಲ್ಲಿ ಅಪಾರ ಅಡಿಕೆ, ತೆಂಗಿನ ಮರಗಳು ಮುರಿದು ಬಿದ್ದಿವೆ. ಹಲವು ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ರೈತರ ಕೃಷಿ ತೋಟಕ್ಕೆ ಅಪಾರ ಹಾನಿಯಾದ ಬಗ್ಗೆ ವರದಿಯಾಗಿದೆ. ಭೀಕರ ಗಾಳಿಯಿಂದಾಗಿ ಕಡಬ ತಾಲೂಕಿನ ವಿವಿಧೆಡೆ ಹಲವು ಮನೆಗಳಿಗೆ ಹಾನಿಗೀಡಾಗಿರುವುದಾಗಿ ತಿಳಿದುಬಂದಿದೆ. ಉಳಿದಂತೆ ಹಾನಿಗೀಡಾಗಿರುವ ಸ್ಪಷ್ಠ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.