ಕಾಸರಗೋಡು: ಪತ್ರಕರ್ತ ಸೇರಿದಂತೆ ಇಬ್ಬರಿಗೆ ಕೊರೋನ ಪಾಸಿಟಿವ್

ಕಾಸರಗೋಡು, ಎ.29: ಓರ್ವ ಪತ್ರಕರ್ತ ಸೇರಿದಂತೆ ಬುಧವಾರ ಕಾಸರಗೋಡಿನಲ್ಲಿ ಇಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿದೆ. ಖಾಸಗಿ ಚಾನೆಲ್‌ವೊಂದರ ವರದಿಗಾರನಿಗೆ ಸೋಂಕು ದೃಢಪಟ್ಟಿದೆ. ಕೇರಳದಲ್ಲಿ ಪ್ರಥಮ ಬಾರಿಗೆ ಪತ್ರಕರ್ತರೋರ್ವರಿಗೆ ಸೋಂಕು ದೃಢಪಟ್ಟಿದೆ.

ಇದರಿಂದ ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ 178ಕ್ಕೇರಿದೆ. ಇಬ್ಬರಿಗೆ ಸೋಂಕಿತರ ಸಂಪರ್ಕ ದಿಂದ ಸೋಂಕು ತಗಲಿದ್ದು, ಬುಧವಾರ ಮೂವರು ಗುಣಮುಖರಾಗಿದ್ದಾರೆ.
ಕೇರಳದಲ್ಲಿ ಇಂದು 10 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 1,990 ಮಂದಿ ನಿಗಾದಲ್ಲಿದ್ದು, ಈ ಪೈಕಿ 29 ಮಂದಿ ಐಸೋಲೇಶನ್ ವಾರ್ಡ್‌ನಲ್ಲಿದ್ದಾರೆ. 695 ಮಂದಿಯ ಸ್ಯಾಂಪಲ್ ಪರೀಕ್ಷಾ ವರದಿ ಇನ್ನೂ ಲಭಿಸಬೇಕಿದೆ.

ಸೋಮವಾರದಿಂದ ಪತ್ರಕರ್ತರಿಗಾಗಿ ತಪಾಸಣೆ ಮತ್ತು ಸ್ಯಾಂಪಲ್ ಸಂಗ್ರಹಿಸಲಾಗಿತ್ತು. 10 ಮಂದಿ ತಪಾಸಣೆಗೆ ಒಳಗಾಗಿದ್ದರು. ಈ ಪೈಕಿ ಓರ್ವನಲ್ಲಿ ಸೋಂಕು ಪತ್ತೆಯಾಗಿದೆ. ಆದರೆ ಸೋಂಕು ದೃಢಪಟ್ಟ ವ್ಯಕ್ತಿಯಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ. ಆದರೆ ವೈದ್ಯಕೀಯ ತಪಾಸಣಾ ವರದಿ ಲಭಿಸಿದಾಗ ಪಾಸಿಟಿವ್ ಪತ್ತೆಯಾಗಿದೆ.

Also Read  ಪಂಜ: ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ನೇಮಕ

ಕಳೆದ ಎರಡು ದಿನಗಳಲ್ಲಿ ಹಲವು ಪತ್ರಕರ್ತರು ತಪಾಸಣೆಗೆ ಒಳಗಾಗಿದ್ದಾರೆ. ಪತ್ರಕರ್ತನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಪತ್ರಕರ್ತರಲ್ಲಿ ಆತಂಕ ಉಂಟು ಮಾಡಿದೆ. ಈ ನಡುವೆ ಜಿಲ್ಲೆಯ ಎಲ್ಲಾ ಪತ್ರಕರ್ತರನ್ನು ತಪಾಣೆಗೆ ಒಳಪಡಿಸಲು ಜಿಲ್ಲಾಡಳಿತ ಮುಂದಾಗಿದೆ.

ಸೋಂಕು ಪತ್ತೆಯಾದ ಪತ್ರಕರ್ತನ ಸಂಪರ್ಕದಲ್ಲಿದ್ದವರು ನಿಗಾದಲ್ಲಿರುವಂತೆ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದು, ಶೀಘ್ರ ಇವರ ತಪಾಸಣೆ ನಡೆಸಿ ಸ್ಯಾಂಪಲ್ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

error: Content is protected !!
Scroll to Top