ಮಂಗಳೂರು, ಎ.27: ದ.ಕ. ಜಿಲ್ಲೆಗೆ ಹೊರ ರಾಜ್ಯದ ಮೀನು ವಾಹನ ಪ್ರವೇಶ ತಕ್ಷಣದಿಂದ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳೂರಿನ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರದ ಸಮಸ್ಯೆ ಇರುವುದರಿಂದ ಮತ್ತು ಜಿಲ್ಲೆಯಲ್ಲಿ ಕೊರೋನ ಗಂಭೀರ ಸಮಸ್ಯೆ ಇರುವುದರಿಂದ ಹೊರ ರಾಜ್ಯದಿಂದ ಜಿಲ್ಲೆಗೆ ಬರುವ ಮೀನು ವಾಹನಗಳಿಗೆ ತಕ್ಷಣವೇ ನಿರ್ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿ ದ.ಕ. ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಜಿಲ್ಲಾಡಳಿತ ಮೀನುಗಾರಿಕೆಗೆ ನಿರ್ಬಂಧ ಸಡಿಲಿಕೆ ಮಾಡಿದ ಬಳಿಕ ಇತರ ರಾಜ್ಯಗಳಿಂದ ಮೀನು ತುಂಬಿದ ಟ್ರಕ್‌ಗಳು ರಾತ್ರಿ ಮೀನುಗಾರಿಕಾ ಬಂದರಿಗೆ ಆಗಮಿಸುತ್ತಿದ್ದು, ಮೀನುಗಾರಿಕೆಗಾಗಿ ಬಂದರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಿಗಳು ಕಾರ್ಮಿಕರು ಸೇರುತ್ತಿದ್ದರು.
ಇಲ್ಲಿ ಮೀನುಗಳನ್ನು ಲಾರಿಗಳಿಂದ ಅನ್ ಲೋಡ್ ಮಾಡಲು ಜೊತೆಗೆ ಮೀನುಗಳ ಹರಾಜು ಪ್ರತಿಕ್ರಿಯೆ ನಡೆಯುತ್ತಿದ್ದು, ಈ ಕಾರಣಕ್ಕೆ ಯಾವುದೇ ಸಾಮಾಜಿಕ ಅಂತರ ಪಾಲಿಸದೆ ಬಂದರು ಪ್ರದೇಶದಲ್ಲಿ 2,000 ಕ್ಕೂ ಹೆಚ್ಚು ಜನರು ಒಟ್ಟಿಗೆ ಸೇರುತ್ತಿದ್ದರು. ಮಾಸ್ಕ್, ಕೈ ಗವಸುಗಳು ಮತ್ತು ಇತರ ಸುರಕ್ಷತಾ ಸಾಧನಗಳನ್ನು ಧರಿಸದೆ ಕಾರ್ಮಿಕರು ಮೀನು ವಿಲೇವಾರಿ ಕೆಲಸದಲ್ಲಿ ನಿರತರಾಗಿದ್ದರು. ಹೀಗಾಗಿ ಇಲ್ಲಿ ಕ್ರಮ ಅನಿವಾರ್ಯವಾಗಿತ್ತು.